ಯಡಿಯೂರಪ್ಪಗೆ ತಾಕತ್ತಿದ್ದರೆ ನೇರವಾಗಿ ಚರ್ಚೆಗೆ ಬರಲಿ: ಎಚ್.ಡಿ.ಕುಮಾರಸ್ವಾಮಿ ಸವಾಲು

ಮಂಡ್ಯ, ಮೇ 25: ನನ್ನ ಕುಟುಂಬದ ವಿರುದ್ಧ ಬೇರೆ ಯಾರಿಂದಲೋ ಅರ್ಜಿ ಹಾಕಿಸುವ ಬದಲು, ಯಡಿಯೂರಪ್ಪ ಅವರೇ ತಾಕತ್ತಿದ್ದರೆ ನನ್ನೊಂದಿಗೆ ನೇರವಾಗಿ ಚರ್ಚೆಗೆ ಬರಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಅಮಾವಾಸ್ಯೆ ಹಿನ್ನೆಲೆಯಲ್ಲಿ ಗುರುವಾರ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯಲ್ಲಿ ಪತ್ನಿ ಸಮೇತ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ತನ್ನ ಅಧಿಕಾರವಧಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದರು.
ಕಾಂಗ್ರೆಸ್‌ನವರಿಗಾಗಲೀ, ಬಿಜೆಪಿಯವರಿಗಾಗಲೀ ನನ್ನ ಆಡಳಿತಾವಧಿಯ ವಿಷಯದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಯಡಿಯೂರಪ್ಪ ತನ್ನ ಅಧಿಕಾರವಧಿಯ ಮೂರು ವರ್ಷದಲ್ಲಿ ಎಷ್ಟು ಭ್ರಷ್ಟಾಚಾರ ನಡೆಸಿದ್ದಾರೆಂಬುದು ರಾಜ್ಯದ ಜತೆಗೆ ಗೊತ್ತಿದೆ ಎಂದು ಅವರು ಎದುರೇಟು ನೀಡಿದರು.
ಯಡಿಯೂರಪ್ಪ ನನ್ನ ಕುರಿತು ಯಾವುದೋ ಪುಸ್ತಕ ಬಿಡುಗಡೆ ಮಾಡುತ್ತಾರಂತೆ. ಆ ಪುಸ್ತಕದಲ್ಲಿ ನನ್ನ ಬಗ್ಗೆ ಬರೆಯುವುದು ಏನೂ ಇಲ್ಲ. ಬೇಕಾದರೆ, ಯಡಿಯೂರಪ್ಪ ಅವರ ಭೂಹಗರಣ, ಲಂಚ ಪ್ರಕರಣ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಲೂಟಿ ಮಾಡಿರುವುದನ್ನು ಬರೆದುಕೊಳ್ಳಲಿ ಎಂದು ಅವರು ಲೇವಡಿ ಮಾಡಿದರು.
ತೇಜಸ್ವಿನಿ ರಮೇಶ್‌ಗೌಡ ಅವರ ಟೀಕೆಗೆ ನಾನು ಉತ್ತರ ಕೊಡುವ ಅಗತ್ಯವಿಲ್ಲ, ಬೇರೆಯವರು ಉತ್ತರ ಕೊಡುತ್ತಾರೆ. ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ದಬ್ಬಾಳಿಕೆ ಶಾಶ್ವತವಲ್ಲ, ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಸರಣಿ ಸಭೆಗಳನ್ನು ನಡೆಸುತ್ತಿರುವುದನ್ನು ಗಮನಿಸಿದರೆ ರಾಜ್ಯದಲ್ಲಿ ಅವಧಿಗೆ ಮುನ್ನವೇ, ಅಂದರೆ, ಡಿಸೆಂಬರ್‌ಗೆ ಚುನಾವಣೆ ನಡೆದರೂ ಆಶ್ಚರ್ಯವಿಲ್ಲ ಎಂದೂ ಕುಮಾರಸ್ವಾಮಿ ಹೇಳಿದರು.
ಕೆಲವರು ದೇವೇಗೌಡರ ಕುಟುಂಬವನ್ನು ಹೊಗಳಿ ಸ್ಥಾನಮಾನ ಪಡೆಯುವ ಯತ್ನ ನಡೆಸಿದರೆ, ಮತ್ತೆ ಕೆಲವರು ತೆಗಳಿ ಸ್ಥಾನಮಾನ ಪಡೆಯುವವರೂ ಇದ್ದಾರೆ. ಚಲುವರಾಯಸ್ವಾಮಿಗೆ ದಿವಂತ ಎಚ್.ಡಿ.ಜಯರಾಂ ಈಗ ನೆನಪಾಗಿದ್ದಾರೆ ಎಂದು ಅವರು ಟೀಕಿಸಿದರು.
ರಾಜ್ಯ ಬರದಲ್ಲಿ ಸಿಲುಕಿದೆ. ಹಾಗಾಗಿ, ಶ್ರೀಮಠದಲ್ಲಿ ಮುರು ಅಮಾವಾಸ್ಯೆ ಪೂಜೆ ಸಲ್ಲಿಸುವ ಸಂಕಲ್ಪ ಮಾಡಿದ್ದೇನೆ. ಈಗ ಎರಡು ಅಮಾವಾಸ್ಯೆ ಮುಗಿದಿದೆ. ಮುಂದಿನ ಅಮಾವಾಸ್ಯೆಗೂ ಪೂಜೆ ಸಲ್ಲಿಸುತ್ತೇನೆ ಎಂದವರು ಸ್ಪಷ್ಟಪಡಿಸಿದರು.
ಶಾಸಕರಾದ ಎನ್.ಅಪ್ಪಾಜಿಗೌಡ, ಕೆ.ಟಿ.ಶ್ರೀಕಂಠೇಗೌಡ, ಶಾಸಕ ನಾರಯಣಗೌಡ, ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ಕೆ.ಸುರೇಶ್‌ಗೌಡ, ಎಲ್.ಆರ್.ಶಿವರಾಮೇಗೌಡ, ಜಿಪಂ ಸದಸ್ಯ ಶಿವಪ್ರಕಾಶ್, ಜಾ.ದಳ ತಾಲೂಕು ಅಧ್ಯಕ್ಷ ಜವರೇಗೌಡ, ಶ್ರೀನಿವಾಸ್, ನೆಲ್ಲಿಗೆರೆ ಬಾಲು, ಇತರೆ ಮುಖಂಡರು ಉಪಸ್ಥಿತರಿದ್ದರು.







