ಸಿಡಿಲು ಬಡಿದು ಮೃತಪಟ್ಟ ಕುಟುಂಬಗಳಿಗೆ ಪರಿಹಾರಕ್ಕೆ ಒತ್ತಾಯ
ಚಿಕ್ಕಮಗಳೂರು, ಮೇ.25: ಕಡೂರು ತಾಲೂಕಿನ ಕುರುಬಗೆರೆಯಲ್ಲಿ ಇತ್ತೀಚೆಗೆ ಸಿಡಿಲು ಬಡಿದು ಮೃತಪಟ್ಟ ಮಹಿಳೆ ಮತ್ತು ಯುವಕನ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡು ವಂತೆ ಕಡೂರು ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಎಂ.ರಾಜಣ್ಣ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಅವರು ಗುರುವಾರ ಈ ಕುರಿತು ಹೇಳಿಕೆ ನೀಡಿದ್ದು, ಕಡೂರು ತಾಲೂಕಿನ ಕುರುಬಗೆರೆ ಗ್ರಾಮದಲ್ಲಿ ಮೇ 12ರಂದು ಕುರಿ ಮೇಯಿಸುವ ವೇಳೆ ಸಿಡಿಲು ಬಡಿದು ಶೋಭಾ ಎಂಬ ಮಹಿಳೆ ಮತ್ತು ಅರುಣ ಎಂಬ ಯುವಕ ಹಾಗೂ ಒಂದು ಕುರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆದರೆ ಘಟನೆ ನಡೆದು 14 ದಿನಗಳಾದರೂ ಮೃತರ ಕುಟುಂಬಕ್ಕೆ ತಾಲೂಕು ಆಡಳಿತ ಯಾವುದೇ ಪರಿಹಾರ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಘಟನೆ ನಡೆದ 24 ಗಂಟೆಗಳ ಒಳಗೆ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕಾಗಿದ್ದರೂ ಇಲ್ಲಿಯವರೆಗೂ ತಾಲೂಕು ಆಡಳಿತ ಪರಿಹಾರ ನೀಡದೇ ನಿರ್ಲಕ್ಯ ತಾಳಿದೆ.
ಈ ಬಗ್ಗೆ ಕಡೂರು ತಹಶೀಲ್ದಾರ್‌ರನ್ನು ಭೇಟಿ ಮಾಡಿ ವಿಚಾರಿಸಿದಾಗ ಸರಕಾರದಿಂದ ಅನುದಾನ ಬಂದಿಲ್ಲ ಎಂದು ತಿಳಿಸಿದ್ದಾರೆ. ತುರ್ತು ಸಂದಭರ್ಗಳಲ್ಲಿ ವಿತರಿಸಲು ತಾಲೂಕು ಆಡಳಿತದ ಬಳಿ ಪರಿಹಾರದ ಹಣ ಇಲ್ಲದಿದ್ದರೆ ಬಡವರು ಮತ್ತು ನಿರ್ಗತಿಕರು ಮೃತಪಟ್ಟರೆ ಅವರ ಕುಟುಂಬ ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಸಿಡಿಲು ಬಡಿದು ಮೃತಪಟ್ಟ ಮಹಿಳೆ ಮತ್ತು ಯುವಕನ ಕುಟುಂಬದವರು ಕಡುಬಡವರಾಗಿದ್ದು, ಪರಿಹಾರ ಸಿಗದೇ ಕಂಗಾಲಾಗಿದ್ದಾರೆ. ಪರಿಹಾರಕ್ಕಾಗಿ ಪ್ರತಿನಿತ್ಯ ತಾಲೂಕು ಕಚೇರಿಗೆ ಅಲೆಯುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮಧ್ಯಪ್ರವೇಶಿಸಬೇಕು, ಮೃತರ ಕುಟುಂಬಕ್ಕೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿರುವ ರಾಜಣ್ಣ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಮೃತರ ಕುಟುಂಬದ ಸದಸ್ಯರೊಂದಿಗೆ ತಾಲೂಕು ಕಚೇರಿ ಮುಂದೆ ಧರಣಿ ನಡೆಸುವ ಎಚ್ಚರಿಕೆ ನೀಡಿದ್ದಾರೆ.







