ಅಸ್ಸಾಂ- ಅರುಣಾಚಲದ ನಡುವಿನ ಸಂಪರ್ಕ ಕೊಂಡಿ: ಭಾರತದ ಅತೀ ದೊಡ್ಡ ಸೇತುವೆ ಮೇ 26ರಂದು ಲೋಕಾರ್ಪಣೆ

ಗುವಾಹಟಿ, ಮೇ 25: ಸುಮಾರು 40 ಟನ್ ತೂಕದ ಯುದ್ದಟ್ಯಾಂಕ್‌ಗಳ ಭಾರವನ್ನು ತಾಳಿಕೊಳ್ಳುವ ಸಾಮರ್ಥ್ಯ ಇರುವ, ದೇಶದ ಅತ್ಯಂತ ದೊಡ್ಡ ಸೇತುವೆ ಎಂಬ ಹೆಗ್ಗಳಿಕೆ ಹೊಂದಿರುವ ಧೋಲ- ಸದಿಯ ಸೇತುವೆಯನ್ನು ಇಂದು (ಮೇ 26ರಂದು) ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ.
ಹತ್ತು ವರ್ಷದ ಹಿಂದೆ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಈ ಸೇತುವೆ ನಿರ್ಮಾಣ ಕಾರ್ಯಕ್ಕೆ ಅಡಿಗಲ್ಲು ಹಾಕಲಾಗಿತ್ತು. ನಿರ್ಮಾಣ ಕಾರ್ಯ 2011ರಲ್ಲಿ ಆರಂಭವಾದಾಗ ಯೋಜನೆಯ ವೆಚ್ಚವನ್ನು ಸುಮಾರು 950 ಕೋಟಿ ರೂ. ಎಂದು ನಿಗದಿಗೊಳಿಸಲಾಗಿತ್ತು. 2014ರಲ್ಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಈ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಿದ ಪರಿಣಾಮ ಮೂರೇ ವರ್ಷದಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡು ಈಗ ಉದ್ಘಾಟನೆಗೆ ಸಜ್ಜಾಗಿದೆ.
ಅಸ್ಸಾಂನಲ್ಲಿ , ಸುಮಾರು 9.2 ಕಿ.ಮೀ. ಉದ್ದದ ಈ ಸೇತುವೆಯನ್ನು ಬ್ರಹ್ಮಪುತ್ರ ನದಿಯ ಉಪನದಿಯಾದ ಲೋಹಿತ್ ನದಿಗೆ ಸದಿಯ ಎಂಬಲ್ಲಿ ಕಟ್ಟಲಾಗಿದೆ. ಸದಿಯ ಅಸ್ಸಾಂ ರಾಜಧಾನಿ ಗುವಾಹಟಿಯಿಂದ 540 ಕಿಮೀ ದೂರದಲ್ಲಿದೆ. ಇದರ ಇನ್ನೊಂದು ತುದಿ ಅರುಣಾಚಲ ಪ್ರದೇಶದ ಧೋಲ ಎಂಬಲ್ಲಿದೆ. ಧೋಲ ಅರುಣಾಚಲ ರಾಜಧಾನಿ ಇಟಾನಗರದಿಂದ 300 ಕಿ.ಮೀ ದೂರದಲ್ಲಿದೆ. ಮುಂಬೈಯ ಬಾಂದ್ರ-ವೋರ್ಲಿ ಸೇತುವೆಗಿಂತ ಸುಮಾರು ಶೇ.30ರಷ್ಟು ಉದ್ದವಿರುವ ಈ ಸೇತುವೆ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ನಡುವಿನ ಪ್ರಯಾಣದ ಅವಧಿಯನ್ನು ಸುಮಾರು 4 ಗಂಟೆಗಳಷ್ಟು ಕಿರಿದಾಗಿಸಲಿದೆ. ಅರುಣಾಚಲ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಯಾವುದೇ ವಿಮಾನ ನಿಲ್ದಾಣ ಇಲ್ಲದ ಕಾರಣ ಈ ಸೇತುವೆಗೆ ಹೆಚ್ಚಿನ ಮಹತ್ವವಿದೆ.
ಸಮರ ತಂತ್ರದ ಹಿನ್ನೆಲೆಯಲ್ಲಿ ಈ ಸೇತುವೆ ಸೇನೆಗೆ ಭಾರೀ ಮಹತ್ವದ್ದಾಗಿದೆ. ಈ ಸೇತುವೆಯ ಮೂಲಕ ಚೀನಾದ ಗಡಿಭಾಗದಲ್ಲಿರುವ ಅರುಣಾಚಲ ಪ್ರದೇಶಕ್ಕೆ ಸೇನೆ ಸುಲಭವಾಗಿ ಮತ್ತು ವೇಗವಾಗಿ ತಲುಪಬಹುದು. ಅಲ್ಲದೆ 60 ಟನ್ ತೂಕದ ಟ್ಯಾಂಕ್‌ಗಳ ಭಾರವನ್ನು ತಾಳಿಕೊಳ್ಳುವ ಸಾಮರ್ಥ್ಯ ಇದಕ್ಕಿರುವುದರಿಂದ ಟ್ಯಾಂಕ್‌ಗಳ ಸಂಚಾರ ಸರಾಗವಾಗಿ ನಡೆಯಬಹುದು. ಇದುವರೆಗೆ ಅಸ್ಸಾಂನಿಂದ ಅರುಣಾಚಲ ಪ್ರದೇಶಕ್ಕೆ ಹೆಚ್ಚಿನ ರಸ್ತೆ ಸಂಪರ್ಕ ಇರಲಿಲ್ಲ. ಜನತೆ ಬಹುತೇಕ ದೋಣಿಗಳನ್ನು ಸಂಚಾರ ಮಾಧ್ಯಮವಾಗಿ ಬಳಸುತ್ತಿದ್ದರು. 2015ರಲ್ಲಿ ಕೇಂದ್ರ ಸರಕಾರ ಗಡಿಭಾಗದ ರಾಜ್ಯಗಳಲ್ಲಿ ರಸ್ತೆ ಸಂಪರ್ಕ ಸುಧಾರಿಸುವ ಯೋಜನೆಯಲ್ಲಿ ಈ ಸೇತುವೆ ನಿರ್ಮಾಣ ಕಾರ್ಯವನ್ನು ಸೇರಿಸಿ 15,000 ಕೋಟಿ ರೂ. ಒದಗಿಸಿತ್ತು.







