ಮಲಯಾಳ ಕಡ್ಡಾಯ ಅಧ್ಯಾದೇಶಕ್ಕೆ ಅಂಗೀಕಾರ
ಗಡಿನಾಡ ಕನ್ನಡಿಗರ ಹೋರಾಟಕ್ಕೆ ಸಿಗದ ಜಯ
ಕಾಸರಗೋಡು, ಮೇ 25: ಗಡಿನಾಡ ಕನ್ನಡಿಗರ ವಿರೋಧದ ನಡುವೆಯೇ ಕೇರಳ ಸರಕಾರದ ಮಲಯಾಳ ಭಾಷಾ ಕಡ್ಡಾಯ ಅಧ್ಯಾದೇಶಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಗಿದೆ.
ಕೇರಳದಲ್ಲಿ ಸಿಬಿಎಸ್‌ಇ, ಐಸಿಎಸ್‌ಇ, ಸಹಿತ ಎಲ್ಲಾ ಸರಕಾರಿ, ಅಂಗೀಕೃತ, ಖಾಸಗಿ ಶಾಲೆಗಳಲ್ಲಿ ಒಂದರಿಂದ ಹತ್ತನೆ ತರಗತಿವರೆಗೆ ಮಲಯಾಳ ಭಾಷೆ ಅಧ್ಯಯನ ಕಡ್ಡಾಯ ಮಸೂದೆಗೆ ಅಂಗೀಕಾರ ನೀಡಿದೆ.
ಇದು ರಾಜ್ಯದ ಕನ್ನಡ, ಆಂಗ್ಲ, ತಮಿಳು ಮಾಧ್ಯಮ ಶಾಲೆ ಗಳಿಗೆ ಅನ್ವಯಿಸುತ್ತಿದೆ. ಮಲಯಾಳ ಭಾಷೆ ಕಲಿಸದ ಶಾಲೆಗಳ ಮಾನ್ಯತೆಯನ್ನು ರದ್ದುಗೊಳಿಸಲಾಗುವುದು, ಶಾಲಾ ಮುಖ್ಯ ಶಿಕ್ಷಕರಿಗೆ 5,000 ರೂ. ದಂಡ ವಿಧಿಸಲಾಗುವುದು. ಮಲಯಾಳ ಭಾಷಾ ಮಸೂದೆಯಿಂದ ಜಿಲ್ಲೆಯ ಭಾಷಾ ಅಲ್ಪಸಂಖ್ಯಾತ ಶಾಲೆಗಳ ಮೇಲೆ ನೇರ ಪರಿಣಾಮ ಬೀರ ಲಿದೆ. ಕನ್ನಡ ಮಾಧ್ಯಮದಲ್ಲಿ ಮಾತ್ರ ಕಲಿಸುವ ಶಾಲೆಗಳು ಇನ್ನು ಮುಂದೆ ಮಲಯಾಳ ಭಾಷೆಯನ್ನು ಒಂದು ಪಠ್ಯ ವಿಷಯವಾಗಿ ಕಲಿಸಬೇಕು. ಈ ಶೈಕ್ಷಣಿಕ ವರ್ಷವಾದ ಜೂನ್ ಒಂದರಿಂದಲೆ ಆದೇಶ ಜಾರಿಗೆ ಬರಲಿದೆ.
ಮಲಯಾಳ ಕಡ್ಡಾಯ ಆದೇಶದಿಂದ ಭಾಷಾ ಅಲ್ಪ ಸಂಖ್ಯಾತ ಕಾಸರಗೋಡು ಜಿಲ್ಲೆಗೆ ವಿನಾಯಿತಿ ನೀಡಬೇಕೆಂಬ ಪ್ರತಿಭಟನೆ, ಒತ್ತಾಯದ ನಡುವೆ ಮಸೂದೆಗೆ ಅಂಗೀಕಾರ ನೀಡಲಾಗಿದೆ. ಮಸೂದೆಯ ವಿರುದ್ಧ ಕನ್ನಡ ಹೋರಾಟ ಸಮಿತಿಯ ವತಿಯಿಂದ ಮಂಗಳವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ದಿಗ್ಬಂಧನ ಹಾಕಲಾಗಿತ್ತು.
ಮಸೂದೆ ಅಂಗೀಕಾರಗೊಂಡಿರುವುದರಿಂದ ಕನ್ನಡ ಮಾಧ್ಯಮ ಶಾಲೆಗಳು ಆತಂಕದ ನೆರಳಿನಲ್ಲಿದ್ದು, ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.
ಜೂನ್ ಒಂದರಂದು ಕರಾಳ ದಿನ
ಮಲಯಾಳ ಕಡ್ಡಾಯ ಮಸೂದೆಯನ್ನು ಪ್ರತಿಭಟಿಸಿ ಹೋರಾಟವನ್ನು ತೀವ್ರಗೊಳಿಸಲು ಗುರುವಾರ ಕಾಸರಗೋಡಿನಲ್ಲಿ ನಡೆದ ಕನ್ನಡ ಹೋರಾಟ ಸಮಿತಿಯ ಸಭೆ ತೀರ್ಮಾನಿಸಿದೆ. ಮೇ 27ರಂದು ಕಾಸರಗೋಡು ಮತ್ತು ಮಂಜೇಶ್ವರ ತಾಲೂಕು ಕಚೇರಿಗೆ ಜಾಥಾ ಮತ್ತು ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ. ಮೇ 31ರಂದು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಲಿದೆ.
ಶಾಲಾರಂಭ ದಿನವಾದ ಜೂನ್ ಒಂದರಂದು ಜಿಲ್ಲೆ ಯಲ್ಲಿ ಕರಾಳ ದಿನ ಆಚರಿಸಲು ಹೋರಾಟ ಸಮಿತಿ ತೀರ್ಮಾನಿಸಿದೆ. ಮಸೂದೆಯನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ದಾವೆ ಹೂಡಲು, ಕಾನೂನಾತ್ಮಕವಾಗಿ ಹೋರಾಟ ನಡೆಸಲು ಹೋರಾಟ ಸಮಿತಿ ಮಹತ್ವದ ತೀರ್ಮಾನ ಕೈಗೊಂಡಿದೆ.







