ಕಾಡಾನೆ ದಾಳಿ: ಕಾರ್ಮಿಕ ಗಂಭೀರ ಗಾಯ
ಸುಂಟಿಕೊಪ್ಪ, ಮೇ.26: ಕರಿಮೆಣಸು ಕಾವಲು ಕಾಯುತ್ತಿದ್ದ ಕಾರ್ಮಿಕನ ಮೇಲೆ ದಾಳಿ ನಡೆಸಿದ ಕಾಡಾನೆ ಆತನನ್ನು ಕಾಲಿನಿಂದ ಒದ್ದು ಗಂಭೀರವಾಗಿ ಗಾಯಗೊಳಿಸಿದ ಘಟನೆ ನಡೆದಿದೆ.
ನಾಕೂರು ಶಿರಂಗಾಲ ಗ್ರಾಮ ಪಂಚಾಯತ್ ಗೆ ಸೇರಿದ ಶಿರಂಗಾಲ ಗ್ರಾಮದ ಪನ್ಯ ತೋಟದ ಗೀತಾ ನರೇಂದ್ರ ಎಂಬವರು ತೋಟದಲ್ಲಿದ್ದ ವೇಳೆ ಕಾಡಾನೆಯೊಂದು ತೋಟದ ಗೇಟನ್ನು ಮುರಿದು ಒಳನುಗ್ಗಿ ದಾವಣಗೆಯ ದೇವನಾಯಕ ಅವರ ಪುತ್ರ ರವಿ (18) ಯನ್ನು ಗಂಭೀರವಾಗಿ ಗಾಯಗೊಳಿಸಿದೆ ಎಂದು ತಿಳಿದುಬಂದಿದೆ.
ಗಾಯಾಳುವನ್ನು ಮಡಿಕೇರಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಮಂಗಳೂರು ವೆನ್ಲಾಕ್ ದಾಖಲಿಸಲಾಗಿದೆ.
ಶಾಶ್ವತ ಪರಿಹಾರ ನೀಡಲಿ: ಕಾಡಾನೆ ಹಾವಳಿಯನ್ನು ಸರಕಾರ ತಡೆಗಟ್ಟಬೇಕು. ದಾಳಿಗೊಳಗಾದವರಿಗೆ ಶಾಶ್ವತ ಪರಿಹಾರ ನೀಡಬೇಕು ಪ್ರತಿನಿತ್ಯ ನಮ್ಮ ಗ್ರಾಮದಲ್ಲಿ ರಾತ್ರಿ ವೇಳೆ ಕಾಡಾನೆಗಳು ತೋಟಕ್ಕೆ ಪ್ರವೇಶಿಸುತ್ತಿವೆ. ಜನರು ಆತಂಕದಲ್ಲಿದ್ದಾರೆ. ಕಾಡಾನೆ ದಾಳಿಯಿಂದ ಸತ್ತವರಿಗೆ ಕೇವಲ 5 ಲಕ್ಷ ಪರಿಹಾರ ನೀಡಿ ಕೈ ತೊಳೆದುಕೊಳ್ಳುವುದು ಸರಿಯಲ್ಲ, 1 ಕೋಟಿ ರೂ ವೆಚ್ಚ ಮಾಡಿ ಸೋಲಾರ್ ಬೇಲಿ ನಿರ್ಮಿಸಿ ಶಾಶ್ವತವಾಗಿ ಕಾಡಾನೆ ನಾಡಿಗೆ ಬರದಂತೆ ತಡೆಗಟ್ಟಬೇಕು ಎಂದು ಗ್ರಾ.ಪಂ. ಸದಸ್ಯ ಕೆ.ಪಿ.ವಸಂತ ಕುಮಾರ್ ಹೇಳಿದರು.







