ಇಸ್ಕಾನ್ ದೇವಸ್ಥಾನದಲ್ಲಿದ್ದ ಪಾಕ್ ಪ್ರಜೆಯ ಬಂಧನ

ರೋಹ್ಟಕ್,ಮೇ 26 : ದಿಲ್ಲಿ-ಹರ್ಯಾಣ ಗಡಿಯಲ್ಲಿರುವ ಬಹಾದುರ್‌ಘರ್ ಎಂಬ ಪಟ್ಟಣದಲ್ಲಿರುವ ಇಸ್ಕಾನ್ ದೇವಾಲಯದಲ್ಲಿ ವಾಸವಾಗಿದ್ದ ಪಾಕಿಸ್ತಾನಿ ನಾಗರಿಕನೊಬ್ಬನನ್ನು ಗುರುವಾರ ಸಂಜೆ ಬಂಧಿಸಲಾಗಿದೆ. ಆತನಿಂದ ಪಾಕಿಸ್ತಾನಿ ಪಾಸ್‌ಪೋರ್ಟನ್ನು ವಶಪಡಿಸಿಕೊಳ್ಳಲಾಗಿದ್ದು ಅದರಲ್ಲಿ ಆತನ ಹೆಸರು ರಾಜಾ, ಪಾಕಿಸ್ತಾನದ ಲರ್ಕಾನದಲ್ಲಿನ ಹಿಂದು ಕಾಲನಿ ನಿವಾಸಿ ಎಂದು ನಮೂದಿಸಲಾಗಿದೆ. ಆತನಿಗೆ ನೀಡಲಾದ ಭಾರತೀಯ ವೀಸಾದ ಅವಧಿ 2016ರಲ್ಲಿ ಅಂತ್ಯಗೊಂಡಿದೆ. ಆತ ಇಸ್ಕಾನ್ ದೇವಳದಲ್ಲಿ ಕಳೆದ ಒಂಬತ್ತು ತಿಂಗಳಿಂದ ವಾಸವಾಗಿದ್ದನೆನ್ನಲಾಗಿದೆ. ಆತನಿಂದ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ವಶಪಡಿಸಿಕೊಳ್ಳಲಾಗಿದ್ದು ಆತನ ಪಾಸ್ ಪೋರ್ಟ್ ನಲ್ಲಿರುವ ಜನನ ದಿನಾಂಕಕ್ಕೂ ಆಧಾರ್, ಪ್ಯಾನ್ ಕಾರ್ಡಿನಲ್ಲಿರುವ ಜನನ ದಿನಾಂಕಕ್ಕೂ ವ್ಯತ್ಯಾಸವಿರುವುದು ಕಂಡು ಬಂದಿದೆ. ಅಷ್ಟೇ ಅಲ್ಲದೆ ಆತನ ಹೆಸರು ಕೂಡ ರಸರಾಜ್ ಎಂದು ನಮೂದಿತವಾಗಿದ್ದರೆ ವಿಳಾಸ ಇಸ್ಕಾನ್ ದೇವಾಲಯ, ಬಹಾದುರ್‌ಘರ್ ಎಂದು ತಿಳಿಸಲಾಗಿದೆ. ಆತನಲ್ಲಿರುವ ದಾಖಲೆಗಳ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಪೊಲೀಸರಲ್ಲಿ ಆತ ತಾನೊಬ್ಬ ಹಿಂದು ಹಾಗು ತನಗೆ ಭಾರತದಲ್ಲಿಯೇ ನೆಲೆಸಬೇಕೆಂಬ ಇಚ್ಛೆಯಿದೆ ಎಂದು ಹೇಳಿದ್ದಾನೆ.
ತನಿಖೆ ನಡೆಯುತ್ತಿದೆ.





