ಗೋಸಾಗಾಟದ ಸಂಶಯ: ಟ್ರಕ್ ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಆರೆಸ್ಸೆಸ್ ಕಾರ್ಯಕರ್ತ ಸಹಿತ ಐವರ ಬಂಧನ

ಭಿಲ್ವಾರ, ಮೇ 26: ರಾಜಸ್ಥಾನದ ಭಿಲ್ವಾರ ಸಮೀಪದ ಸಾಲಂಪುರದಲ್ಲಿ ಅಕ್ರಮ ಗೋಸಾಗಾಟ ಮಾಡಲಾಗುತ್ತಿದೆ ಎಂಬ ಸಂಶಯದಿಂದ ಬುಧವಾರದಂದು ಟ್ರಕ್ ಒಂದನ್ನು ನಿಲ್ಲಿಸಿ ಅದಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೆಸ್ಸೆಸ್ ಕಾರ್ಯಕರ್ತನೊಬ್ಬ ಸೇರಿದಂತೆ ಒಟ್ಟು 5 ಮಂದಿಯನ್ನು ಶುಕ್ರವಾರ ಬಂಧಿಸಿದ್ದಾರೆ.
ಆರೋಪಿಗಳಲ್ಲೊಬ್ಬನಾದ ಲೋಕೇಶ್ ಆರೆಸ್ಸೆಸ್ ಕಾರ್ಯಕರ್ತನೆಂದು ತಿಳಿದು ಬಂದಿದ್ದು, ಉಳಿದ ಆರೋಪಿಗಳಾದ ಸನವ್ರ ಜಾಟ್, ಭಾಗ್ ಚಂದ್ ರೇಗರ್, ಶಂಕರ್ ಧಕಡ್ ಹಾಗೂ ನಂದ ಗುರ್ಜರ್ ವಿವಿಧ ಗೋರಕ್ಷಾ ಸಂಘಟನೆಗಳಲ್ಲಿ ಶಾಮೀಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವರೆಲ್ಲ ಹೆದ್ದಾರಿ ಮೇಲೆ ಕಣ್ಣಿಟ್ಟಿದ್ದು ಅಲ್ಲಿ ಹಾದು ಹೋಗುತ್ತಿದ್ದ ಟ್ರಕ್ ನಲ್ಲಿ ಗೋವುಗಳನ್ನು ಸಾಗಿಸಲಾಗುತ್ತಿದೆಯೆಂಬ ಸಂಶಯದಿಂದ ಅದನ್ನು ತಡೆಹಿಡಿದಿದ್ದರು. ಅವರ ಮಾತನ್ನು ನಂಬಿದ ನೂರಾರು ಗ್ರಾಮಸ್ಥರು ಸ್ಥಳದಲ್ಲಿ ಸೇರುತ್ತಿದ್ದಂತೆಯೇ ಟ್ರಕ್ಕಿಗೆ ಬೆಂಕಿ ಹಚ್ಚಲಾಗಿತ್ತು. ಅದರ ಚಾಲಕ ಮತ್ತು ಸಹಾಯಕ ವಾಹನದಿಂದ ಹಾರಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಟ್ರಕ್ ನಲ್ಲಿ ದನಗಳಿರಲಿಲ್ಲ ಬದಲಾಗಿ ಹೋರಿಗಳಿದ್ದವು, ಅವುಗಳನ್ನು ಭಿಲ್ವಾರಾದ ವಿವಿಧ ಗ್ರಾಮಗಳಿಂದ ಉದಯಪುರದಲ್ಲಿರುವ ಜಾನುವಾರು ಜಾತ್ರೆಗೆ ಕರೆದೊಯ್ಯಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಬಿಡುಗಡೆಗೊಳಿಸುವಂತೆ ಸಂಘ ಪರಿವಾರದ ಹಲವರಿಂದ ತಮಗೆ ಕರೆಗಳು ಬರುತ್ತಿವೆಯೆಂದು ಪೊಲೀಸ್ ಮೂಲಗಳು ತಿಳಿಸಿವೆಯೆನ್ನಲಾಗಿದೆ. ಪೆಹ್ಲು ಖಾನ್ ಎಂಬ ಹರ್ಯಾಣದ ಡೈರಿ ಮಾಲಕರೊಬ್ಬರು ತನ್ನ ಡೈರಿಗಾಗಿ ಕೆಲವು ದನಗಳನ್ನು ಸಾಗಾಟಗೊಳಿಸುತ್ತಿದ್ದಾಗ ಅವರನ್ನು ಗೋರಕ್ಷಕರು ಹೊಡೆದು ಸಾಯಿಸಿದ ಘಟನೆಯ ಒಂದು ತಿಂಗಳ ತರುವಾಯ ಭಿಲ್ವಾರದ ಘಟನೆ ನಡೆದಿದೆ.







