ಅಕಾಲಿಕ ಮಳೆಯಿಂದ ಹಾನಿಗೊಳಗಾದ ಬೆಳೆಗಾರರಿಗೆ ಪರಿಹಾರ ನೀಡಲು ಒತ್ತಾಯ

ಚಿಕ್ಕಮಗಳೂರು, ಮೇ.26: ಬರಗಾಲದಿಂದ ತತ್ತರಿದ್ದ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಹರ್ಷ ತಂದಿದೆ. ಈ ನಡುವೆ ಅರೆಕಾಲಿಕ ಮಳೆಯಿಂದ ಬೆಳೆ ಹಾನಿ ಆಗಿದ್ದು, ಕೂಡಲೇ ಜಿಲ್ಲಾಡಳಿತ ಹಾನಿಗೊಳಗಾದ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ಘೋಷಣೆ ಮಾಡುವಂತೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಚ್. ದೇವರಾಜ್ ಒತ್ತಾಯಿಸಿದರು.
ಅವರು ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಮುಂಗಾರು ಪೂರ್ವ ಮಳೆಯಿಂದ ರೈತರಿಗೆ ವರದಾನವಾಗಿದೆ. ಹಲವೆಡೆ ರೈತರು ಬಿರುಸಿನ ಕೃಷಿ ಚಟುವಟಿಕೆಗೆ ಮುಂದಾಗಿದ್ದಾರೆ. ಬಿತ್ತನೆ ಬೀಜ ಹಾಗೂ ರಾಸಾಯನಿಕ ಗೊಬ್ಬರಗಳನ್ನು ರೈತರಿಗೆ ಉಚಿತವಾಗಿ ಸರ್ಕಾರ ಪೂರೈಸಬೇಕೆಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಪ್ರಾರಂಭವಾಗಿರುವ ನೀರಾವರಿ ಯೋಜನೆಗಳ ಕಾಮಗಾರಿಗಳು ಕುಂಟುತ್ತಾ ಸಾಗಿದ್ದು, ಕೂಡಲೇ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ರೈತರ ಜಮೀನಿಗೆ ನೀರು ಒದಗಿಸಬೇಕು ಎಂದು ಜೆಡಿಎಸ್ ಒತ್ತಾಯಿಸುವುದಾಗಿ ತಿಳಿಸಿದರು.
ಮಸಗಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಒಕ್ಕಲೆಬ್ಬಿಸುವ ಕಾರ್ಯವನ್ನು ಜೆಡಿಎಸ್ ಖಂಡಿಸುತ್ತದೆ. ಈಗಾಗಲೇ ಮಸಗಲಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ 3/4 ದಲಿತ ಕಾಲನಿಗಳಿವೆ. ಬಡ, ಮದ್ಯಮ ವರ್ಗದ ರೈತರು ಹಾಗೂ ಕೂಲಿ ಕಾರ್ಮಿಕ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಿಗೆ ತೊಂದರೆಯಾಗದಂತೆ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಜನರ ನೆರವಿಗೆ ಬರಬೇಕು. ಅಲ್ಲದೇ ಅಧಿಕಾರಿಗಳು ಜನರನ್ನು ಒಕ್ಕಲೆಬ್ಬಿಸದಂತೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಜೆಡಿಎಸ್ ಜಿಲ್ಲಾ ಪಧಾನ ಕಾರ್ಯದರ್ಶಿ ಜಿ.ಎಸ್. ಚಂದ್ರಪ್ಪ, ಜಯರಾಜೇ ಅರಸ್, ರಮೇಶ್, ಮಂಜಪ್ಪಯ್ಯ ಮತ್ತಿತರರಿದ್ದರು.







