ವಾಸ್ತವಿಕ ನಿರ್ಧಾರಗಳಿಂದ ಜನತೆಯ ಬದುಕಿನಲ್ಲಿ ಪರಿವರ್ತನೆ : ಮೋದಿ
ಎನ್‌ಡಿಎ ಸರಕಾರದ ತೃತೀಯ ವರ್ಷಾಚರಣೆ

ಹೊಸದಿಲ್ಲಿ, ಮೇ 26: ಕಳೆದ ಮೂರು ವರ್ಷಗಳಿಂದ ಕೇಂದ್ರದ ಎನ್‌ಡಿಎ ಸರಕಾರ ಕೈಗೊಂಡ ವಾಸ್ತವಿಕ ನಿರ್ಧಾರಗಳು ಜನತೆಯ ಬದುಕಿನಲ್ಲಿ ಪರಿವರ್ತನೆಗೆ ಕಾರಣವಾಗಿವೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ನರೇಂದ್ರಮೋದಿ ಆ್ಯಪ್‌ನಲ್ಲಿ ನಡೆಸಲಾಗುತ್ತಿರುವ ಕೇಂದ್ರ ಸರಕಾರದ ಸಾಧನೆಯ ಸಮೀಕ್ಷೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವಂತೆ ಜನತೆಗೆ ಕರೆ ನೀಡಿದ್ದಾರೆ.
ತಮ್ಮ ನೇತೃತ್ವದ ಎನ್‌ಡಿ ಸರಕಾರದ ಮೂರನೇ ವರ್ಷಾಚರಣೆಯ ಸಂದರ್ಭ ಸರಣಿ ಟ್ವೀಟ್ ಮಾಡಿರುವ ಮೋದಿ, ‘ಸಾಥ್ ಹೈ, ವಿಶ್ವಾಸ್ ಹೈ, ಹೋರಹ ವಿಕಾಸ್ ಹೈ’ ( ಸಹಕಾರವಿದೆ, ವಿಶ್ವಾಸವಿದೆ ಮತ್ತು ಅಭಿವೃದ್ಧಿ ಆಗುತ್ತಿದೆ) ಎಂದು ತಿಳಿಸಿದ್ದಾರೆ. 2014ರಲ್ಲಿ ಎನ್‌ಡಿಎ ಸರಕಾರ ಆಡಳಿತದ ಚುಕ್ಕಾಣಿ ಹಿಡಿದ ಸಂದರ್ಭ ದೇಶದ ವಿವಿಧ ಕ್ಷೇತ್ರದಲ್ಲಿ ಇದ್ದ ಸ್ಥಿತಿಗೂ ಈಗಿನ ಸ್ಥಿತಿಗೂ ಇರುವ ವ್ಯತ್ಯಾಸವನ್ನು ಅಂಕಿಅಂಶದ ಸಹಿತ ವಿವರಿಸಿದ್ದಾರೆ.
ಕೃಷಿ, ಮೊಬೈಲ್ ಬ್ಯಾಂಕಿಂಗ್, ಮಹಿಳಾ ಸಶಕ್ತೀಕರಣ, ಮೇಕ್ ಇನ್ ಇಂಡಿಯಾ, ಪ್ರವಾಸೋದ್ಯಮ, ವಿದ್ಯುದೀಕರಣ, ಸೌರಶಕ್ತಿ, ಎಲ್‌ಇಡಿ ಬಲ್ಬ್‌ಗಳ ವಿತರಣೆ- ಇತ್ಯಾದಿ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿಯನ್ನು ರೇಖಾಚಿತ್ರ ಸಹಿತ ವಿವರಿಸಿದ್ದಾರೆ. ‘ಮೇಕ್ ಇನ್ ಇಂಡಿಯಾ’ ಅಭಿಯಾನದಿಂದಾಗಿ ಇಲೆಕ್ಟ್ರಾನಿಕ್ಸ್ ವಸ್ತುಗಳ ಉತ್ಪಾದನೆಗೆ ಭಾರೀ ಉತ್ತೇಜನ ದೊರೆತಿದೆ. 2013-14ರಲ್ಲಿ ಇಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ವಿದೇಶಿ ಬಂಡವಾಳದ ಮೊತ್ತ 11,198 ಕೋಟಿ ರೂ. ಆಗಿದ್ದರೆ, ಈಗ 1,43,000 ಕೋಟಿ ರೂ.ಗೆ ತಲುಪಿದೆ. ‘ಡಿಜಿಟಲ್ ಇಂಡಿಯಾ ಫಾರ್ ಡೆವಲಪ್‌ಡ್ ಇಂಡಿಯಾ’ ಅಭಿಯಾನದಡಿ ಆಪ್ಟಿಕಲ್ ಫೈಬರ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಸೇವೆ 2013-14ರಲ್ಲಿ 358 ಕಿ.ಮೀ ಇದ್ದರೆ, ಈಗ 2,05,404 ಕಿ.ಮೀ.ಗೆ ತಲುಪಿದೆ.
ಸೌರಶಕ್ತಿ ಕ್ಷೇತ್ರದಲ್ಲಿ ದೇಶವು ಭಾರೀ ಮುನ್ನಡೆ ಸಾಧಿಸಿದ್ದು 2014ರಲ್ಲಿ 2621 ಮೆಗವ್ಯಾಟ್ ಸೌರಶಕ್ತಿ ಉತ್ಪಾದನೆಯಾಗಿದ್ದರೆ ಈಗ 12277 ಮೆಗವ್ಯಾಟ್ ಸೌರವಿದ್ಯುತ್‌ಶಕ್ತಿ ಉತ್ಪಾದನೆಯಾಗುತ್ತಿದೆ. ವಿಶ್ವ ಆರ್ಥಿಕ ವೇದಿಕೆ(ಡಬ್ಯ್ಲೂಇಎಫ್) ಯ ವಿಶ್ವ ಪ್ರವಾಸೋದ್ಯಮ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ 2014ರಲ್ಲಿ 65ನೇ ಸ್ಥಾನದಲ್ಲಿದ್ದರೆ ಈಗ 40ನೇ ಸ್ಥಾನ ಗಳಿಸಿದೆ ಎಂದು ಮೋದಿ ಗ್ರಾಫಿಕ್ಸ್ ಸಹಿತ ಅಂಕಿ ಅಂಶವನ್ನು ಟ್ವೀಟ್ ಮಾಡಿದ್ದಾರೆ.







