ಫೇಸ್‌ಬುಕ್ ಗೆಳೆಯನಿಗೆ ಪೋಷಕರ ಖಾಸಗಿ ವಿಡಿಯೊ ರವಾನಿಸಿದ ಅಪ್ರಾಪ್ತ ಬಾಲಕ
2 ಕೋಟಿ ರೂ.ಗೆ ದುಷ್ಕರ್ಮಿಯಿಂದ ಬ್ಲಾಕ್‌ಮೇಲ್

ಬೆಂಗಳೂರು, ಮೇ 26: ತಂದೆ-ತಾಯಿಯ ಖಾಸಗಿ ವಿಡಿಯೊಯನ್ನೇ ಅಪ್ರಾಪ್ತ ಬಾಲಕನೊಬ್ಬ ಫೇಸ್‌ಬುಕ್ ಗೆಳೆಯನಿಗೆ ರವಾನಿಸಿದ್ದು, ಆತ ಅದನ್ನಿಟ್ಟುಕೊಂಡು ಪೋಷಕರಿಗೆ ಬ್ಲಾಕ್‌ಮೇಲ್ ಮಾಡುತ್ತಿರುವ ಬಗೆಗಿನ ದೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಪ್ರಕರಣದ ವಿವರ: 13 ವರ್ಷದ ಬಾಲಕ ತನ್ನ ಮೊಬೈಲ್‌ನಲ್ಲಿ ಫೇಸ್‌ಬುಕ್ ಖಾತೆ ಮಾಡಿಕೊಂಡು ನಂತರ ಫೇಸ್‌ಬುಕ್‌ಗೆ ತೇಜಲ್ ಪಟೇಲ್ ಎನ್ನುವ ವ್ಯಕ್ತಿಯ ಗೆಳೆಯನಾಗಿದ್ದಾನೆೆ. ಬಳಿಕ ಈತ ಬಾಲಕನಿಗೆ ನಿರಂತರವಾಗಿ ಅಶ್ಲೀಲ ಫೋಟೋ, ವಿಡಿಯೋ ಕಳಿಸುತ್ತಿದ್ದ. ಹೀಗೆ ಆತನಿಗೆ ಅಶ್ಲೀಲ ದೃಶ್ಯಗಳನ್ನು ನೋಡುವ ಚಟಕ್ಕೆ ಬೀಳಿಸಿದ್ದ ಎನ್ನಲಾಗಿದೆ.
ಅಶ್ಲೀಲ ವಿಡಿಯೊಗಳನ್ನು ನೋಡುವ ಚಟಕ್ಕೆ ಬಿದ್ದ ಅಪ್ರಾಪ್ತ ಬಾಲಕ ತನ್ನ ತಂದೆ-ತಾಯಿಯ ಏಕಾಂತದ ದೃಶ್ಯಗಳನ್ನು ಸೆರೆ ಹಿಡಿದು ಫೇಸ್‌ಬುಕ್ ಗೆಳೆಯನಿಗೆ ರವಾನಿಸಿದ್ದಾನೆ. ಆ ದೃಶ್ಯಗಳನ್ನಿಟ್ಟುಕೊಂಡು ಆತ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೆದರಿಕೆ: ಬಾಲಕ ರವಾನಿಸಿರುವ ಅಶ್ಲೀಲ ವಿಡಿಯೋ ಇಟ್ಟುಕೊಂಡಿದ್ದ ತೇಜಲ್ ಪಟೇಲ್ ಬಾಲಕನ ಪೋಷಕರಿಗೆ ಕರೆ ಮಾಡಿ, 2 ಕೋಟಿ ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗುವುದೆಂದು ಬೆದರಿಕೆ ಹಾಕಿದ್ದಾನೆ. ಇದರಿಂದ ಎಚ್ಚೆತ್ತ ಬಾಲಕನ ತಂದೆ ಸಿಐಡಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಸಿಐಡಿ ಅಧಿಕಾರಿಗಳು ಐಟಿ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತೇಜಲ್‌ಪಟೇಲ್ ಎಂಬ ಹೆಸರಿನ ಫೇಸ್‌ಬುಕ್ ಖಾತೆ ಬಗ್ಗೆ ಪರಿಶೀಲನೆ ನಡೆಸುತ್ತಿರುವ ಪೊಲೀಸರು ಐಪಿ ಅಡ್ರೆಸ್ ಮೂಲಕ ಆತನನ್ನು ಪತ್ತೆ ಮಾಡುವ ಕಾರ್ಯ ಮುಂದುವರಿಸಿದ್ದಾರೆ.







