ವರ್ಗಾವಣೆಗೊಂಡ ನ್ಯಾಯಾಧೀಶರುಗಳಿಗೆ ಬೀಳ್ಕೊಡುಗೆ

ಉಡುಪಿ, ಮೇ 26: ಉಡುಪಿ ವಕೀಲರ ಸಂಘದ ವತಿಯಿಂದ ವರ್ಗಾ ವಣೆಗೊಂಡ ನ್ಯಾಯಾಧೀಶರುಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಶುಕ್ರವಾರ ಉಡುಪಿ ನ್ಯಾಯಾಲಯದ ಸಂಕೀರ್ಣದಲ್ಲಿರುವ ಸಂಘದ ಕಚೇರಿಯಲ್ಲಿ ಆಯೋಜಿಸಲಾಗಿತ್ತು.
ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಕರ್ಣಂ, ಪ್ರಥಮ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಂಜುನಾಥ್, ಎರಡನೆ ಜೆಎಂಎಫ್‌ಸಿ ನ್ಯಾಯಾಧೀಶೆ ಜಾರೀಫಾ ಬಾನು, ನ್ಯಾಯಾಧೀಶೆ ಮಿಲನಾ ವರ್ಗಾವಣೆ ಗೊಂಡಿದ್ದು, ಇವರಲ್ಲಿ ಸಮಾರಂಭದಲ್ಲಿ ಹಾಜರಿದ್ದ ರಾಜೇಶ್ ಕರ್ಣಂ ಹಾಗೂ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಬಳಿಕ ಮಾತನಾಡಿದ ರಾಜೇಶ್ ಕರ್ಣಂ, ನ್ಯಾಯವಾದಿಗಳಿಂದ ಸಾಕಷ್ಟು ವಿಷಯಗಳನ್ನು ನ್ಯಾಯಾಧೀಶರು ತಿಳಿದುಕೊಳ್ಳಬಹುದು. ಜ್ಞಾನ ತುಂಬಿಸುವ ಕೆಲಸವನ್ನು ವಕೀಲರು ಮಾಡುತ್ತಾರೆ. ನ್ಯಾಯ ತೀರ್ಪು ನೀಡಲು ಅವರ ವಾದವೇ ನಮಗೆ ಮಾರ್ಗದರ್ಶನವಾಗಿರುತ್ತದೆ. ವಕೀಲರು ವ್ಯವಸ್ಥಿತವಾಗಿ ಕೆಲಸ ನಿರ್ವಹಿಸಿದರೆ ನ್ಯಾಯಾಧೀಶರಿಗೆ ಕೆಲಸವೇ ಇರಲ್ಲ. ವಕೀಲರು ಹಾಗೂ ನ್ಯಾಯಾಧೀಶರ ಮಧ್ಯೆ ಉತ್ತಮ ಬಾಂಧವ್ಯ ಅಗತ್ಯ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಮಾತನಾಡಿ, ಉತ್ತಮ ನ್ಯಾಯಾಧೀಶರಾಗುವಲ್ಲಿ ನ್ಯಾಯ ವಾದಿಗಳ ಪಾತ್ರ ಮುಖ್ಯವಾಗಿರುತ್ತದೆ. ನ್ಯಾಯಾಧೀಶರು ಹಾಗೂ ನ್ಯಾಯ ವಾದಿಗಳ ಮಧ್ಯೆ ಸೌಹಾರ್ದತೆ ಇರಬೇಕು. ಪರಸ್ಪರ ಸಹಕಾರದಿಂದ ಉತ್ತಮ ವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಶಿವರಾಂ ಕೆ., ಮೂರನೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ರಾಮಪ್ರಶಾಂತ್ ಉಪಸ್ಥಿತರಿದ್ದರು. ಹಿರಿಯ ವಕೀಲರಾದ ಎನ್.ಕೆ.ಆಚಾರ್ಯ, ವಿಜಯ ಹೆಗ್ಡೆ, ಅಸದುಲ್ಲಾ ಮಾತನಾಡಿ ದರು. ವಕೀಲರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ಸ್ವಾಗತಿಸಿದರು. ಅಖಿಲ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.







