ಮೇ 28: ಅಂಬಾಭವಾನಿ ಮರಾಠಿ ಸಾಂಸ್ಕೃತಿಕ ಕಲಾ ವೇದಿಕೆ ಉದ್ಘಾಟನೆ
ಉಡುಪಿ, ಮೇ 26: ಮರಾಠಿ ಸಮುದಾಯದ ವಿಶಿಷ್ಟ ಆಚರಣೆ, ಸಂಪ್ರದಾಯ, ವಿವಿಧ ಕಲಾ ಪ್ರಕಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಸ್ಥಾಪಿಸಿರುವ ಶ್ರೀ ಅಂಬಾಭವಾನಿ ಮರಾಠಿ ಸಾಂಸ್ಕೃತಿಕ ಕಲಾ ವೇದಿಕೆ ಪರ್ಕಳ ವಲಯದ ಉದ್ಘಾಟನೆ ಮೇ 28ರಂದು ಪರ್ಕಳ ಸಭಾಭವನದಲ್ಲಿ ನಡೆಯಲಿದೆ.
ಪರ್ಕಳ ವಲಯವನ್ನು ಕೇಂದ್ರವಾಗಿ ಇಟ್ಟುಕೊಂಡು ಜಿಲ್ಲೆಯ ಸುಮಾರು 15ಕ್ಕೂ ಅಧಿಕ ಗ್ರಾಮದ ಸುಮಾರು 32 ಕೂಡುವಳಿಯ ಸ್ವಜಾತಿ ಬಾಂಧವರನ್ನು ಒಟ್ಟುಗೂಡಿಸಿ ಸಂಘಟಿಸಿ ವೇದಿಕೆಯನ್ನು ನೋಂದಣಿ ಮಾಡಲಾಗಿದೆ ಎಂದು ವೇದಿಕೆ ಅಧ್ಯಕ್ಷ ಕೃಷ್ಣ ನಾಯ್ಕಾ ಮಾರ್ಪಳ್ಳಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಬೆಳಗ್ಗೆ 8:30ರಿಂದ ಕೆಳಕಬ್ಯಾಡಿ ಶ್ರೀದುರ್ಗಾಂಬಾ ಭವಾನಿ ದೇವಸ್ಥಾನದಿಂದ ಶೋಭಾಯಾತ್ರೆ ಜರಗಲಿದೆ. 10 ಗಂಟೆಗೆ ವೇದಿಕೆಯನ್ನು ತುಳುಜಾ ಭವಾನಿ ಜಿಲ್ಲಾ ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಅನಂತ ನಾಯ್ಕೆ ಉದ್ಘಾಟಿಸ ಲಿರುವರು.
ವಿವಿಧ ಕ್ಷೇತ್ರಗಳ ಸಮುದಾಯದ ಸಾಧಕರನ್ನು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು, ಸಮುದಾಯದ ಗುರಿಕಾರರನ್ನು ಸನ್ಮಾನಿಸಲಾಗುವುದು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಹರಿದಾಸ್ ನಾಯ್ಕಿ, ಮಹಿಳಾ ಅಧ್ಯಕ್ಷೆ ಮಾಲತಿ ನಾಯ್ಕೆ, ಅಚ್ಯುತ ನಾಯ್ಕೆ, ಸತೀಶ್ ನಾಯ್ಕೆ ಉಪಸ್ಥಿತರಿದ್ದರು.







