ಗ್ರೇಟರ್ ನೊಯ್ಡ ಘಟನೆ: ನಾಲ್ವರು ಮಹಿಳೆಯರ ಸಾಮೂಹಿಕ ಅತ್ಯಾಚಾರ ನಡೆದಿಲ್ಲ- ವೈದ್ಯರು

ನೊಯ್ಡ,ಮೇ 26: ಗ್ರೇಟರ್ ನೊಯ್ಡದ ಜೇವರ್‌ನಲ್ಲಿ ನಾಲ್ವರು ಮಹಿಳೆಯರ ಸಾಮೂಹಿಕ ಅತ್ಯಾಚಾರ ನಡೆದಿರುವ ಸಾಧ್ಯತೆಯನ್ನು ಪ್ರಾಥಮಿಕ ವೈದ್ಯಕೀಯ ವರದಿಯು ತಳ್ಳಿಹಾಕಿದೆ ಎಂದು ಗೌತಮ ಬುದ್ಧ ನಗರದ ಮುಖ್ಯ ವೈದ್ಯಾಧಿಕಾರಿ ಡಾ.ಅನುರಾಗ್ ಭಾರ್ಗವ್ ಅವರು ಶುಕ್ರವಾರ ಸಂಜೆ ಇಲ್ಲಿ ತಿಳಿಸಿದರು.
ಗುರುವಾರ ಬೆಳಗಿನ ಜಾವ ಯಮುನಾ ಎಕ್ಸ್‌ಪ್ರೆಸ್ ಹೆದಾರಿಯಲ್ಲಿ ಕಾರನ್ನು ತಡೆದು ನಿಲ್ಲಿಸಿದ್ದ ಆರು ಜನ ಲೂಟಿಕೋರರ ಗುಂಪು ಅದರಲ್ಲಿದ್ದ ನಾಲ್ವರು ಮಹಿಳೆಯರನ್ನು ಪಕ್ಕದ ಗದ್ದೆಗೆ ಎಳೆದೊಯ್ದು ಅತ್ಯಾಚಾರ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಮಹಿಳೆಯರ ರಕ್ಷಣೆಗೆ ಮುಂದಾಗಿದ್ದ ಸಂಬಂಧಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.
ನೊಯ್ಡ ಜಿಲ್ಲಾಧಿಕಾರಿ ಬಿ.ಎನ್.ಸಿಂಗ್ ಮತ್ತು ಎಸ್‌ಎಸ್‌ಪಿ ಲವಕುಮಾರ್ ಅವರ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಭಾರ್ಗವ್ ಅವರು, ಮಹಿಳೆಯ ರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ಮೇಲ್ನೋಟಕ್ಕೆ ಅತ್ಯಾಚಾರ ನಡೆದಿರುವ ಯಾವುದೇ ಕುರುಹುಗಳು ಕಂಡುಬಂದಿಲ್ಲ. ಹೆಚ್ಚಿನ ಪರೀಕ್ಷೆಗಾಗಿ ಅವರ ಅಂಗಾಂಶ ಸ್ಯಾಂಪಲ್‌ಗಳು ಮತ್ತು ಬಟ್ಟೆಗಳನ್ನು ಲಕ್ನೋದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗುತ್ತಿದ್ದು, 2-3 ವಾರಗಳಲ್ಲಿ ಅದರ ವರದಿ ಕೈಸೇರಲಿದೆ ಎಂದರು.
ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬರುವವರೆಗೂ ಎಫ್‌ಐಆರ್‌ನಲ್ಲಿ ಸಾಮೂಹಿಕ ಆತ್ಯಾಚಾರದ ಆರೋಪವಿರಲಿದೆ. ನಾವು ನೆರೆಯ ರಾಜ್ಯಗಳ ಪೊಲೀಸರ ಸಹಕಾರವನ್ನೂ ಕೋರಿದ್ದು,ಶೀಘ್ರವೇ ಪ್ರಕರಣವನ್ನು ಭೇದಿಸಲಿದ್ದೇವೆ ಎಂದು ಲವಕುಮಾರ್ ಆಶಯ ವ್ಯಕ್ತಪಡಿಸಿದರು.
ಈ ಘಟನೆಯ ಉದ್ದೇಶ ಲೂಟಿಯಾಗಿತ್ತು ಎಂದು ಅವರು ಹೇಳಿದರು.
ಆರೋಪಿಗಳ ಪತ್ತೆಗಾಗಿ 50 ಪೊಲೀಸ್ ಅಧಿಕಾರಗಳ ತಂಡ ಕಾರ್ಯಾಚರಣೆ ನಡೆಸುತ್ತಿದೆ ಎಂದರು.
ಗುರುವಾರದಿಂದ ಸಂತ್ರಸ್ತರ ಐವರು ನೆರೆಕರೆಯವರು ಸೇರಿದಂತೆ 20ಕ್ಕೂ ಅಧಿಕ ಜನರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ನೆರೆಕರೆಯವರ ಪಾತ್ರವನ್ನು ಸಂತ್ರಸ್ತ ಮಹಿಳೆಯರು ನಿರಾಕರಿಸಿದ ಬಳಿಕ ಶುಕ್ರವಾರ ಬೆಳಿಗ್ಗೆ ಅವರನ್ನು ಬಿಡುಗಡೆ ಮಾಡಲಾಗಿದೆ.







