ಕೋಮು ವೈಷಮ್ಯ ಹರಡುತ್ತಿರುವ ಮಿಥುನ್ ಪೂಜಾರಿ ತಂಡದ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ

ಬಂಟ್ವಾಳ, ಮೇ 26: ಶುಕ್ರವಾರ ಮಧ್ಯಾಹ್ನ ನಮಾಝ್ ಮುಗಿಸಿ ಮಸೀದಿಯಿಂದ ಹೊರಬರುತ್ತಿದ್ದ ಯುವಕರಿಬ್ಬರ ಮೇಲೆ ದಾಳಿ ನಡೆಸಿದ ಮಿಥುನ್ ಪೂಜಾರಿ ಹಾಗೂ ಆತನ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಕಲ್ಲಡ್ಕದ ನಾಗರಿಕರು, ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೊಲೆ, ಕೊಲೆ ಯತ್ನ, ದರೋಡೆ ಪ್ರಕರಣಗಳ ಆರೋಪಿ ಮಿಥುನ್
ಕಲ್ಲಡ್ಕದ ಮಿಥುನ್ ಪೂಜಾರಿ ಹಾಗೂ ಆತನ ಸಹಚರರು ಈ ಹಿಂದೆ ಹಲವು ಸಮಾಜವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿ ಬಂಧನಕ್ಕೊಳಗಾಗಿದ್ದರು. ತಲಪಾಡಿಯ ಬದ್ರುದ್ದೀನ್, 2015ರ ಟಿಪ್ಪು ಜಯಂತಿ ಸಂದರ್ಭ ಹರೀಶ್ ಪೂಜಾರಿ ಕೊಲೆ ಪ್ರಕರಣ ಸಹಿತ ಹಲವು ಕೊಲೆ ಯತ್ನ, ದರೋಡೆ, ಹಫ್ತಾ ವಸೂಲಿ, ಗಲಭೆಗೆ ಸಂಚು ಮೊದಲಾದ ಕೃತ್ಯಗಳಲ್ಲಿ ಮಿಥುನ್ ಹಾಗೂ ಆತನ ತಂಡ ಭಾಗಿಯಾಗಿರುವ ಆರೋಪಗಳಿವೆ.
ಕಲ್ಲಡ್ಕ ಸಹಿತ ಬಂಟ್ವಾಳ ಪೊಲೀಸ್ ವೃತ್ತ ವ್ಯಾಪ್ತಿಯಲ್ಲಿ ಪದೇ ಪದೇ ಗಂಭೀರ ಅಪರಾಧ ಕೃತ್ಯ ಎಸಗುತ್ತಿರುವ ಈ ತಂಡ ಎರಡು ತಿಂಗಳ ಹಿಂದೆ ಸಜಿಪ ಮುನ್ನೂರಿನ ಹರೀಶ್ ಗೌಡ ಎಂಬವರ ಕೊಲೆಯತ್ನ ಹಾಗೂ ದರೋಡೆ ಪ್ರಕರಣದಲ್ಲಿ ಜೈಲು ಸೇರಿತ್ತು. ಎರಡು ವಾರದ ಹಿಂದೆಯಷ್ಟೇ ಜಾಮೀನಿನಿಂದ ಹೊರ ಬಂದ ಈ ಆರೋಪಿಗಳು ಹಾಡಹಗಲೇ ಇಬ್ಬರಿಗೆ ಚೂರಿ ಇರಿದು ಕೊಲೆಗೆ ಯತ್ನಿಸಿರುವ ಘಟನೆಯಿಂದಾಗಿ ಕಲ್ಲಡ್ಕ ಪರಿಸರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ರಾಜಕೀಯ ಒತ್ತಡದಿಂದ ಪೊಲೀಸರು ಆರೋಪಿಗಳ ವಿರುದ್ಧ ಮೃದು ಧೋರಣೆ ತಳೆದಿದ್ದಾರೆ. ಹಿಂದೆ ನಡೆಸಿದ ಅಪರಾಧ ಕೃತ್ಯಗಳ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡದ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಆರೋಪಿಗಳಿಗೆ ಸುಲಭವಾಗಿ ಜಾಮೀನು ದೊರೆಯುತ್ತದೆ. ಇದು ಅವರಿಗೆ ಪದೇ ಪದೇ ಅಪರಾಧ ಕೃತ್ಯ ಎಸಗಲು ಸಹಕಾರಿಯಾಗುತ್ತದೆ ಎಂದು ಮುಸ್ಲಿಮ್ ಮುಖಂಡರು ಆರೋಪಿಸಿದ್ದಾರೆ.
ಯುವಕರಿಗೆ ಚೂರಿ ಇರಿತ: ಶುಕ್ರವಾರದ ನಮಾಝ್ ಮುಗಿಸಿ ಮಸೀದಿಯಿಂದ ಮನೆಗೆ ತೆರಳುತ್ತಿದ್ದ ಇಬ್ಬರು ಯುವಕರಿಗೆ ಎರಡು ಕಾರಿನಲ್ಲಿ ಬಂದ ಏಳು ಮಂದಿಯ ತಂಡವೊಂದು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿತ್ತು. ಶುಕ್ರವಾರ ಮಧ್ಯಾಹ್ನ ಕಲ್ಲಡ್ಕ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದ್ದು ಪರಿಸರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಕಲ್ಲಡ್ಕ ನಿವಾಸಿ ಯೂಸುಫ್ ಎಂಬವರ ಪುತ್ರ ಮುಹಮ್ಮದ್ ಹಾಶೀರ್(21), ಹಾಗೂ ಗೋಳ್ತಮಜಲು ನಿವಾಸಿ ಅಬ್ದುಲ್ ಮಜೀದ್ ಎಂಬವರ ಪುತ್ರ ಮುಹಮ್ಮದ್ ಮಾಶೂಕ್(17) ಚೂರಿ ಇರಿತಕ್ಕೊಳಗಾದವರು. ಇಬ್ಬರನ್ನು ಕೂಡಲೇ ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.
ಸ್ನೇಹಿತರಾದ ಹಾಶೀರ್ ಮತ್ತು ಮಾಶೂಕ್ ಕಲ್ಲಡ್ಕ ಜುಮಾ ಮಸೀದಿಯಲ್ಲಿ ಜುಮಾ ನಮಾಝ್ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಗೋಲ್ಡ್ ಬಣ್ಣದ ಫೋರ್ಡ್ ಫಿಗೋ ಮತ್ತು ಬಿಳಿ ಬಣ್ಣದ ಬೊಲೆರೋ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹಾಶಿರ್ ಮತ್ತು ಮಾಶೂಕ್‌ನನ್ನು ಅಡ್ಡಹಾಕಿ ಚೂರಿಯಿಂದ ಇರಿದಿದ್ದಾರೆ. ಅಪಾಯದ ಅರಿವಾದ ಇಬ್ಬರೂ ದುಷ್ಕರ್ಮಿಗಳಿಂದ ತಪ್ಪಿಸಿ ಓಡಿ ಹೋಗಿದ್ದು ದುಷ್ಕರ್ಮಿಗಳ ತಂಡ ಸ್ವಲ್ಪ ದೂರದವರೆಗೆ ಬೆನ್ನಟ್ಟಿದೆ. ಬಳಿಕ ಕಾರಿನಲ್ಲಿ ಮಾಣಿ ರಸ್ತೆಯಾಗಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಚೂರಿ ಇರಿದವರನ್ನು ಗೋಳ್ತಮಜಲಿನ ಎರ್ಮೆಮಜಲು ನಿವಾಸಿ ನನ್ನು ಪೂಜಾರಿಯ ಪುತ್ರ ಮಿಥುನ್ ಪೂಜಾರಿ, ಕುದ್ರೆಬೆಟ್ಟು ನಿವಾಸಿಗಳಾದ ಅಣ್ಣು ಪೂಜಾರಿಯ ಪುತ್ರ ಅಮಿತ್ ಪೂಜಾರಿ, ಮಲ್ಲಣ್ಣ ಪೂಜಾರಿ ಎಂಬವರ ಪುತ್ರ ಯತಿನ್ ಪೂಜಾರಿ, ಗಂಗಾಧರ ಎಂಬವರ ಪುತ್ರ ರಂಜಿತ್, ಕಿಟ್ಟ ಎಂಬವರ ಪುತ್ರ ಪುಷ್ಪರಾಜ್, ಕಲ್ಲಡ್ಕ ನಿವಾಸಿ ಶೇಖರ ಎಂಬವರ ಪುತ್ರ ನವೀನ್, ದಾಸಕೋಡಿ ನಿವಾಸಿ ಅಚ್ಚುತ ಎಂದು ಗುರುತಿಸಲಾಗಿದೆ.
ಚೂರಿ ಇರಿತದಿಂದ ಮಾಶೂಕ್‌ನ ಬಲ ಕೈಗೆ ಮತ್ತು ಹಾಶೀರ್‌ನ ಬೆನ್ನಿಗೆ ಗಾಯವಾಗಿದೆ. ಈ ಇಬ್ಬರು ದುಷ್ಕರ್ಮಿಗಳಿಂದ ತಪ್ಪಿಸಿ ಓಡುವ ವೇಳೆ ತಂಡದಲ್ಲಿದ್ದವನೊಬ್ಬ ಕಲ್ಲು ತೂರಿದ್ದು ಪರಿಣಾಮ ಮಾಶೂಕ್‌ನ ಪಾದಕ್ಕೆ ತಾಗಿ ಗಾಯವಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ, ಬಂಟ್ವಾಳ ಡಿವೈಎಸ್ಪಿ ಡಾ. ರವೀಶ್ ಸಿ.ಆರ್. ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ತುಂಬೆ ಆಸ್ಪತ್ರೆಗೆ ಭೇಟಿ ನೀಡಿ ಚೂರಿ ಇರಿತಕ್ಕೊಳಗಾದ ಯುವಕನಿಂದ ಮಾಹಿತಿ ಕಲೆ ಹಾಕಿದ್ದಾರೆ. ಸ್ಥಳದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆ ಎಸ್ಸೈ ಎ.ಕೆ.ರಕ್ಷಿತ್ ಗೌಡ ನೇತೃತ್ವದಲ್ಲಿ ಅವರ ಸಿಬ್ಬಂದಿ ಬಂದೋಬಸ್ತ್ ಕಲ್ಪಿಸಿದ್ದಾರೆ. ಕೊಲೆ ಯತ್ನ ಪ್ರಕರಣ ದಾಖಲಿಸಿರುವ ನಗರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇಂದು ಕಲ್ಲಡ್ಕದಲ್ಲಿ ಇಬ್ಬರು ಯುವಕರಿಗೆ ಚೂರಿ ಇರಿದ ತಂಡ ಕಲ್ಲಡ್ಕ ಪರಿಸದರಲ್ಲಿ ಪದೇ ಪದೇ ಅಪರಾಧ ಕೃತ್ಯ ಎಸಗುತ್ತಿದ್ದು, ಅವರ ವಿರುದ್ಧ ಕಠಿಣ ಕ್ರಮ ಜರಗಿಸಲಾಗುವುದು. ಆದರೆ ಅವರು ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬರುತ್ತಿದ್ದು ಅವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವ ಬಗ್ಗೆ ಚಿಂತಿಸಲಾಗುವುದು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಕೆಲವರು ಗಲಭೆಗೆ ಸಂಚು ಹೂಡುತ್ತಿದ್ದಾರೆ. ಅದಕ್ಕೆ ಯಾರೂ ಪ್ರೋತ್ಸಾಹ ನೀಡದೆ ಶಾಂತಿ ಕಾಪಾಡಬೇಕು. ರಮಝಾನ್ ಹಾಗೂ ಇತರ ಹಬ್ಬಗಳು ಹತ್ತಿರ ಬರುತ್ತಿರುವುದರಿಂದ ಜಿಲ್ಲೆಯಲ್ಲಿ ಭದ್ರತೆ ಹೆಚ್ಚಿಸಲಾಗುವುದು.
- ಭೂಷಣ್ ಜಿ. ಬೊರಸೆ. ದ.ಕ. ಎಸಿ







