ಸಂಚಾರ ನಿಯಮ ಉಲ್ಲಂಘಿಸಿದರೆ ಮನೆಗೇ ನೋಟಿಸ್: ಐಜಿಪಿ ಸಲೀಂ
ಟ್ರಾಫಿಕ್ ಆಟೋಮೇಷನ್ ಕೇಂದ್ರ ಉದ್ಘಾಟನೆ

ದಾವಣಗೆರೆ, ಮೇ 26: ಪೊಲೀಸ್ ಇಲಾಖೆಯಲ್ಲಿ ಪಾರ ದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಟ್ರಾಫಿಕ್ ಆಟೋ ಮೇಷನ್ ಕೇಂದ್ರ ಉದ್ಘಾಟನೆ ಮಾಡಲಾಗಿದೆೆ ಎಂದು ಪೂರ್ವ ವಲಯ ಐಜಿಪಿ ಡಾ.ಎಂ.ಎ. ಸಲೀಂ ತಿಳಿಸಿದ್ದಾರೆ.
ಶುಕ್ರವಾರ ನಗರ ಉಪಾಧೀಕ್ಷಕರ ಕಚೇರಿ ಆವರಣದಲ್ಲಿ ಟ್ರಾಫಿಕ್ ಆಟೋಮೇಷನ್ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಭ್ರಷ್ಟಾಚಾರ ತಡೆಗಟ್ಟಿ ಟ್ರಾಫಿಕ್ ಸುಧಾರಣೆಯಲ್ಲಿ ಪಾರದರ್ಶಕತೆ ಅಳವಡಿಸುವ ನಿಟ್ಟಿನಲ್ಲಿ ಈ ಹೊಸ ವ್ಯವಸ್ಥೆ ನೆರವಾಗಲಿದ್ದು, ಸಂಚಾರ ನಿಯಮ ಉಲ್ಲಂಘಿಸಿದವರಿಗೆ ನೇರವಾಗಿ ಮನೆಗೆ ನೋಟಿಸ್ ತಲುಪುತ್ತದೆ.
ನಂತರ, ವಾಹನ ಮಾಲಕರು ಕೋರ್ಟ್‌ನಲ್ಲಿ ದಂಡ ಕಟ್ಟಲು ಅವಕಾಶವಿದೆ ಎಂದ ಅವರು, ಬೆಂಗಳೂರಿನ ಥಿಮ್ಯಾಟಿಕ್ ಎಂಬ ಸಂಸ್ಥೆ ಈಗಾಗಲೇ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಧಾರವಾಡದಲ್ಲಿ ಈ ಕೇಂದ್ರ ಆರಂಭಕ್ಕೆ ಕೈಜೋಡಿಸಿ ತಾಂತ್ರಿಕ ನೆರವು ನೀಡಿದೆ ಎಂದು ಅವರು ವಿವರಿಸಿದರು.
ಬೆಂಗಳೂರು ಮಾದರಿಯಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ತಡೆಗಟ್ಟುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುತ್ತಿದ್ದು, ಈ ವ್ಯವಸ್ಥೆಯಿಂದ ಮುಂದಿನ ದಿನಗಳಲ್ಲಿ ರಸ್ತೆಗಳಲ್ಲಿ ದಂಡ ವಿಧಿಸುವ ಪದ್ಧತಿ ಸಂಪೂರ್ಣವಾಗಿ ನಿಲ್ಲಲಿದೆ ಎಂದ ಅವರು, ಬೆಂಗಳೂರು ಮೈಸೂರಿನಂತಹ ಕಮಿಷನರೇಟ್ ಜಿಲ್ಲೆಗಳನ್ನು ಹೊರತುಪಡಿಸಿ ಇದೇ ಮೊದಲ ಬಾರಿಗೆ ದಾವಣಗೆರೆ ಜಿಲ್ಲೆಯಲ್ಲಿ ಈ ಕೇಂದ್ರ ಉದ್ಘಾಟನೆಯಾಗಿದೆ ಎಂದರು.
ದಾವಣಗೆರೆಯಲ್ಲಿ ದಿನವೊಂದಕ್ಕೆ ಕನಿಷ್ಠ 1 ಸಾವಿರ ನೋಟಿಸ್ ಹೋಗಬೇಕೆಂಬ ಉದ್ದೇಶವಿದೆ. ಇನ್ನು ಬ್ಲ್ಯಾಕ್ ಬೆರ್ರಿ ಮೊಬೈಲ್ ಬಳಸಿ ದೂರು ದಾಖಲಿಸುವುದಿಲ್ಲ. ಕುಡಿದು ವಾಹನ ಚಲಾಯಿಸುವುದು, ಓವರ್ ಸ್ಪೀಡ್ ಹೊರತುಪಡಿಸಿ ಉಳಿದೆಲ್ಲ ಸಂಚಾರ ನಿಯಮಗಳ ಉಲ್ಲಂಘನೆಯೂ ಆಟೋಮ್ಯಾಟಿಕ್ ಟ್ರಾಫಿಕ್ ಚಲನ್ ಸಿಸ್ಟಂ ಮೂಲಕವೇ ನಡೆಯಲಿದೆ ಎಂದ ಅವರು, ಇದಕ್ಕೆ ಸಂಬಂಧಿಸಿದಂತೆ ಮೊದಲ ದಿನವೇ ಎಸಿ ಸರ್ಕಲ್‌ನಲ್ಲಿ ನೋ ಪಾರ್ಕಿಂಗ್ ಜಾಗದಲ್ಲಿ ಗಾಡಿ ನಿಲ್ಲಿಸಿದ್ದಕ್ಕೆ ಆಟೋ ಮೇಷನ್ ಕೇಂದ್ರದಿಂದ ಕೆಎಸ್ಸಾರ್ಟಿಸಿ ಎಂಡಿಗೆ ಮೊದಲ ನೋಟಿಸ್ ನೀಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಕೇಂದ್ರದಲ್ಲಿ ಆಟೊ ರಿಕ್ಷಾಗೆ ಮೀಟರ್ ಕಡ್ಡಾಯ ಮಾಡಲಿದ್ದು, ಈ ಬಗ್ಗೆ ಸಾರಿಗೆ ಪ್ರಾಧಿಕಾರದ ನಿರ್ಣಯ ವಾಗಬೇಕು. ಸದ್ಯಕ್ಕೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದ ಆಟೋ ಸ್ಟ್ಯಾಂಡ್‌ಗಳಲ್ಲಿ ಪ್ರಿಪೇಯ್ಡಿ ಆಟೊ ಸಿಸ್ಟಂ ಆರಂಭಿಸುವ ಪ್ರಯತ್ನ ಸಾಗಿವೆ ಎಂದರು.
ಶೀಘ್ರವೇ ಶಿವಮೊಗ್ಗ, ಚಿತ್ರದುರ್ಗ, ಹಾವೇರಿಯಲ್ಲೂ ಟ್ರಾಫಿಕ್ ಆಟೋಮೇಷನ್ ವ್ಯವಸ್ಥೆ ತರಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಜನತೆಗೆ ಸೀಟ್ ಬೆಲ್ಟ್ ಕಡ್ಡಾಯ ಮಾಡುವ ಚಿಂತನೆ ಇದೆ. ಜೊತೆಗೆ, ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ ಸಂಖ್ಯೆ ಕಡಿಮೆ ಇದ್ದು, ಇನ್ನಷ್ಟು ಪೊಲೀಸ್ ಸಿಬ್ಬಂದಿ ಹೆಚ್ಚಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಗುಳೇದ್ ಪ್ರಾಸ್ಥಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಎಸ್ಪಿ ಯಶೋಧಾ ವಂಟಗೋಡಿ, ಡಿವೈಎಸ್ಪಿ ಎಂ.ಕೆ. ಗಂಗಲ್, ಥಿಮ್ಯಾಟಿಕ್ ಸಂಸ್ಥೆಯ ಸುಮಂತ್ ಮತ್ತಿತರರಿದ್ದರು.







