ಹತ್ಯೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಚಿಕ್ಕಮಗಳೂರು, ಮೇ 26: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆಗೈದ ಆರೋಪಿತರಿಗೆ ಜೀವಾವಧಿ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ನಗರದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ತೀರ್ಪು ನೀಡಿದೆ.
2015ರ ಮಾ. 25ರಂದು ಸುಮಾರು ರಾತ್ರಿ 10:30ರ ಸಮಯದಲ್ಲಿ ಕಡವಂತಿ ಗ್ರಾಮದ ಬಿಳುಗೊಳ ಕಾಲನಿಯಲ್ಲಿ ತೋಟದ ಒತ್ತುವರಿ ವಿಚಾರದಲ್ಲಿ ಸಿದ್ದಯ್ಯ, ಶೇಷಯ್ಯ ಎಂಬವರು ದ್ಯಾವಯ್ಯ ಮತ್ತು ರಾಧಮ್ಮ ಎಂಬವರನ್ನು ಕಡಿದು ಗಾಯಗೊಳಿಸಿದ್ದರು ಎನ್ನಲಾಗಿದೆ. ಈ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳಾದ ಮಂಜು ಅಲಿಯಾಸ್ ಮಂಜಯ್ಯ, ಸುಂದರೇಶ್,ಮಂಜುನಾಥ, ಜಾನಕಿ, ಸುಜಾತಾ, ಸತೀಶ, ಅಣ್ಣಪ್ಪ, ದಿನೇಶ, ಸುಧಾ, ರೇಣುಕಾ, ಲಕ್ಷ್ಮೆ, ಸುರೇ,ಮಂಜಯ್ಯ ಎಲ್ಲರೂ ಶೇಷಯ್ಯನನ್ನು ದ್ಯಾವಯ್ಯ ಮನೆ ಹತ್ತಿರ ಕರೆದೊಯ್ದು ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಬಾಳೆಹೊನ್ನೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಲಂ 143, 144, 147, 148, 448, 504, 323, 324, 302, 506, ಸಹ ಕಲಂ 149ರ ಅನ್ವಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಪ್ರಭಾವತಿ ಎಂ. ಹಿರೇಮಠ್ ಅವರು ಆರೋಪಿಗಳಿಗೆ ಭಾ.ದಂ.ಸಂ ಕಲಂ 302ರ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ ತಲಾ ರೂ. 7,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಆರೋಪಿಗಳಾದ ಸುರೇಶ್ ಹಾಗೂ ಮಂಜಯ್ಯ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿಲ್ಲ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಕೆ.ಕೆ ಕುಲಕರ್ಣಿ ಮೊಕದ್ದಮೆಯನ್ನು ನಡೆಸಿದ್ದರು.







