ಸಭೆಗೆ ಡಿಸಿ, ಎಸ್ಪಿ ಗೈರು: ಈಶ್ವರಪ್ಪಗರಂ

ಶಿವಮೊಗ್ಗ, ಮೇ 26: ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಶುಕ್ರವಾರ ನಗರದ ಜಿಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು.
ಡಿಸಿ ಹಾಗೂ ಎಸ್ಪಿಯವರು ಸಭೆಗೆ ಯಾವುದೇ ಕಾರಣ ನೀಡದೆ ಗೈರಾಗಿದ್ದಾರೆಂದು ಆರೋಪಿಸಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಹಿರಿಯ ಅಧಿಕಾರಿಗಳ ವಿರುದ್ಧ ತೀವ್ರ ಸಿಡಿಮಿಡಿ ವ್ಯಕ್ತಪಡಿಸಿದ ಘಟನೆ ನಡೆಯಿತು.
ಪಡಿತರ ಚೀಟಿ ವಿಷಯದ ಚರ್ಚೆಯಲ್ಲಿ ಆಹಾರ ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿ ನೀಡುತ್ತಿದ್ದ ವೇಳೆ, ಜೆಡಿಎಸ್ ಸದಸ್ಯ ಎಚ್.ಸಿ. ಯೋಗೇಶ್ ಮಾತನಾಡಿ, ಈ ವಿಷಯದ ಬಗ್ಗೆ ಜಿಲ್ಲಾಧಿಕಾರಿ ಮಾತನಾಡಬೇಕಾಗಿತ್ತು. ಡಿಸಿ, ಎಸ್ಪಿಯವರನ್ನು ಸಾಮಾನ್ಯ ಸಭೆಗೆ ಕರೆಯಿಸಬೇಕು. ಈ ಬಗ್ಗೆ ಹೇಳಿದರೂ ಯಾವುದೇ ಕ್ರಮ ವಾಗುತ್ತಿಲ್ಲವೆಂದರು. ಈ ವೇಳೆ ಕೆ.ಎಸ್. ಈಶ್ವರಪ್ಪಮಾತನಾಡಿ, ಡಿಸಿ-ಎಸ್ಪಿಯವರು ಜಿಪಂ ಸಾಮಾನ್ಯ ಸಭೆಗಳಿಗೆ ಕಡ್ಡಾಯವಾಗಿ ಬರಬೇಕು.
ಗೈರು ಹಾಜರಾ ದರೆ ಸ್ಪಷ್ಟ ಕಾರಣ ನೀಡಬೇಕು. ಆದರೆ ಪ್ರತಿಯೊಂದು ಸಭೆಗೂ ಸಕಾರಾಣವಿಲ್ಲದೆ ಗೈರು ಹಾಜರಾಗುತ್ತಿರುವುದೇಕೆ? ಏನೂ ಹುಡುಗಾಟ ಆಡುತ್ತಿದ್ದಾರಾ? ಯಾವುದಾದರೂ ಒಂದು ಸಭೆಗೆ ಗೈರಾದರೆ ವಿನಾಯಿತಿ ನೀಡಬಹುದು. ಆದರೆ ಪ್ರತಿಯೊಂದು ಸಭೆಗೂ ಗೈರಾಗುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಈ ಬಗ್ಗೆ ಸಂಬಂಧಿಸಿದವರಿಗೆ ನೋಟಿಸ್ ಜಾರಿ ಮಾಡಿ. ಇಲ್ಲದಿದ್ದರೆ ಈ ವಿಷಯದ ಬಗ್ಗೆ ತಾವೇ ಸರಕಾರದ ಗಮನ ಸೆಳೆಯಬೇಕಾಗುತ್ತದೆ’ ಎಂದು ಸಿಇಒ ಡಾ. ಕೆ.ರಾಕೇಶ್‌ಕುಮಾರ್‌ಗೆ ಎಚ್ಚರಿಕೆ ನೀಡಿದರು.







