ಡಾ.ಎಂ.ಆರ್.ರವಿಯವರಿಂದ ಉಳಿಯ ನಿವಾಸಿಗಳ ಅಹವಾಲು ಸ್ವೀಕಾರ: ಸ್ಥಳದಲ್ಲೇ ಹಲವು ಸಮಸ್ಯೆ ಪರಿಹಾರಕ್ಕೆ ಆದೇಶ
ಸ್ವಾತಂತ್ರ ನಂತರ ಪ್ರಥಮ ಬಾರಿಗೆ ಜಿ.ಪಂ. ಸಿಇಒ ಭೇಟಿ

ಮಂಗಳೂರು, ಮೇ 26: ಮಂಗಳೂರು ತಾಲೂಕಿನ ನೇತ್ರಾವತಿ ನದಿ ನಡುವೆ ಇರುವ ಪಾವೂರು ಉಳಿಯ ದ್ವೀಪದ ಜನರ ಸಮಸ್ಯೆ ಆಲಿಸಲು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ ಸ್ಥಳಕ್ಕೆ ಭೇಟಿ ನೀಡಿ ಸ್ವಾತಂತ್ರ ನಂತರ ಪ್ರಥಮ ಬಾರಿಗೆ ಉಳಿಯದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಿದ್ದಾರೆ ಎಂದು ಉಳಿಯದ ಗ್ರಾಮಸ್ಥರು ಅಧಿಕಾರಿಯನ್ನು ಸ್ವಾಗತಿಸಿದರು.
ಜನರ ಅಹವಾಲು ಸ್ವೀಕರಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಲವು ಸಮಸ್ಯೆಯನ್ನು ಸ್ಥಳದಲ್ಲೇ ಪರಿಹರಿಸಲು ಆದೇಶ ನೀಡಿದ್ದಾರೆ.
ಉಳಿಯದಂತಹ ನೈಸರ್ಗಿಕ ಸಂಪನ್ಮೂಲಗಳಿಂದ ಕೂಡಿದ ಸುಂದರ ಪ್ರದೇಶದ ಜನರ ಸಮಸ್ಯೆ ನಿವಾರಿಸಲು ಸರಕಾರದ ಎಲ್ಲಾ ಇಲಾಖೆಯಿಂದ ಸಹಕಾರ ನೀಡುವುದಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರವಿ ತಿಳಿಸಿದರು.
ಮರಳು ಗಾರಿಕೆಯ ಸಮಸ್ಯೆಯ ಬಗ್ಗೆ ಜಿಲ್ಲಾಧಿಕಾರಿಯ ಜೊತೆ ಚರ್ಚಿಸುವುದಾಗಿ ತಿಳಿಸಿದರು. ಉಳಿಯ ಪ್ರದೇಶದಲ್ಲಿ ಉದ್ಯೋಗವಿಲ್ಲದ ಮಹಿಳೆಯರಿಗೆ ತಕ್ಷಣ ಉದ್ಯೋಗ ಚೀಟಿ ಒದಗಿಸಲು ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಆದೇಶ ನೀಡಿದರು. ಜೂನ್ 11ರಂದು ಉಳಿಯ ಪ್ರದೇಶದ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ವಿಶೇಷ ಸಭೆಯನ್ನು ಕರೆಯಲು ಸೂಚಿಸಿದರು.
‘‘ಮಂಗಳೂರು ತಾಲೂಕಿನ ಪಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳಿಯ ನೇತ್ರಾವತಿ ನದಿಯಿಂದ ಆವೃತವಾಗಿರುವ ದ್ವೀಪ ಪ್ರದೇಶ ಈ ದ್ವೀಪದ ಸುತ್ತ ನೀರಿದ್ದರೂ ಜನರು ಕುಡಿಯುವ ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ಇದೆ. ನೇತ್ರಾವತಿ ನದಿ ಸಮುದ್ರ ಸೇರುವ ಅಳಿವೆ ಬಾಗಿಲಿನಿಂದ ಸ್ವಲ್ಪ ಅಂತರದಲ್ಲಿರುವ ಇರುವ ಕಾರಣ ಸಮುದ್ರದ ನೀರು ನದಿಯೊಳಗೆ ಸೇರಿ ನೀರು ಕುಡಿಯಲಾಗದೆ ಉಪ್ಪಾಗಿದೆ. ಸುತ್ತಲೂ ನೀರಿದೆ. ಸಂಪರ್ಕಕ್ಕಾಗಿ ನದಿಯಲ್ಲಿ ದೋಣಿ ಮಾತ್ರ ಆಧಾರ ಈ ಹಿಂದೆ ಬೇಸಗೆಯಲ್ಲಿ ನೀರು ಕಡಿಮೆ ಇದ್ದು ಹೊಯಿಗೆ ಹೆಚ್ಚು ಇದ್ದ ಕಾರಣ ನದಿಯನ್ನು ದಾಟಿ ಇನ್ನೊಂದು ಕಡೆ ಹೋಗಲು ಸಾಧ್ಯವಾಗುತ್ತಿತ್ತು. ಅದಲ್ಲದೆ ಬೇಸಗೆಯಲ್ಲಿ ಉಳಿಯದ ಜನರೇ ಸೇರಿ ನದಿಗೆ ಮರದ ಹಲಗೆ ಸೇರಿಸಿ ಸೇತುವೆ ನಿರ್ಮಿಸುತ್ತಿದ್ದರು. ಆದರೆ ಈಗ ನದಿ ಆಳವಾಗಿರುವ ಕಾರಣ ಅದು ಸಾಧ್ಯವಿಲ್ಲದಾಗಿದೆ. ಇಲ್ಲಿ ನಡೆಯುತ್ತಿರುವ ಮರಳು ಸಾಗಾಟದಿಂದ ಈ ಸಮಸ್ಯೆ ಸೃಷ್ಟಿಯಾಗಿದೆ. ಈಗ ಇಲ್ಲಿನ ಸಮಸ್ಯೆಗೆ ಪರಿಹಾರವಾಗಬೇಕಾದರೆ ಸಂಪರ್ಕಕ್ಕಾಗಿ ಸೇತುವೆ, ತೂಗು ಸೇತುವೆ ನಿರ್ಮಿಸಿ. ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಸಹಾಯ ಮಾಡಿ. ಇದು ಸಮಾಲೋಚನಾ ಸಭೆಯಲ್ಲ , ಶೈಕ್ಷಣಿಕವಾಗಿ ಮುಂದುವರಿದಿರುವ ಜಿಲ್ಲೆಯ ಜನರ ಆತ್ಮಾವಲೋಕನ ಸಭೆ ’’ಎಂದು ಉಳಿಯ ಇನ್‌ಫೆಂಟ್ ಚರ್ಚ್‌ನ ಧರ್ಮಗುರು ವಂ.ಜೆರಾಲ್ಡ್ ಲೋಬೊ ಜನರ ಸಮಸ್ಯೆಯನ್ನು ಸಭೆಯ ಮುಂದಿಟ್ಟರು.
‘‘ಇಲ್ಲಿನ ದ್ವೀಪದ ಸುತ್ತ ಉಪ್ಪು ನೀರು ಇರುವ ಕಾರಣ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಇದ್ದ ಒಂದು ಪ್ರಾಥಮಿಕ ಶಾಲೆಯೂ ಮುಚ್ಚಿದೆ. ಜನರಿಗೆ ಸ್ವಂತ ಉದ್ಯೋಗದ ಸಮಸ್ಯೆಯೂ ಇದೆ ’’ಎಂದು ಸ್ಥಳೀಯ ಪಂಚಾಯತ್ ಸದಸ್ಯ ವಿವೇಕ್ ರೈ ತಿಳಿಸಿದ್ದಾರೆ.
‘‘ಉಳಿಯ ಸುಂದರ ದ್ವೀಪ ಆದರೆ ಇಲ್ಲಿನ ಜನರು ಶಿಕ್ಷಣ ಸೇರಿದಂತೆ ಸಾಕಷ್ಟು ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದಾರೆ. ಇಲ್ಲಿ ಗರಿಷ್ಠ ಪ್ರಮಾಣದಲ್ಲಿ ಮರಳು ತೆಗೆದ ಕಾರಣ ಹಲವು ಸಮಸ್ಯೆ ಸೃಷ್ಟಿಯಾಗಿದೆ. ಈ ದ್ವೀಪದ ಬಗ್ಗೆ ಸರಕಾರ ಪ್ರವಾಸೋದ್ಯಮ ಇಲಾಖೆ ಗಮನ ಹರಿಸಿದರೆ ಈ ದ್ವೀಪ ಪ್ರಪಂಚದ ಗಮನ ಸೆಳೆಯುವ ದ್ವೀಪವಾಗಬಹುದು ’’ಎಂದು ಗ್ರೇಶನ್ ಡಿ ಸೋಜ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
‘‘ನಮ್ಮ ಸಮಸ್ಯೆಯನ್ನು ಯಾರು ಕೇಳುವವರು ಇಲ್ಲವೇ..?’’:-ಇದು ಉಳಿಯ ದ್ವೀಪದ ಮಹಿಳೆಯೊಬ್ಬರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಹವಾಲು ಸಭೆಯಲ್ಲಿ ಮಾತನಾಡುತ್ತಾ,‘‘ನಮ್ಮ ಸಮಸ್ಯೆಯನ್ನು ಯಾರು ಕೇಳುವವರೇ ಇಲ್ಲವೇ ..?ಈ ಪ್ರದೇಶದಲ್ಲಿ 20 ವರ್ಷದಿಂದ ಇದ್ದ ಹಾಗೆ ಪರಿಸ್ಥಿತಿಯಿಲ್ಲ. ಮೊದಲೆಲ್ಲಾ ಬೇಸಗೆಯಲ್ಲಿ ನದಿ ದಾಟ್ತಾ ಇದ್ದೆವು ಈಗ ನದಿಯ ಮರಳು ತೆಗೆದು ನದಿ ಆಳವಾಗಿದೆ. ನದಿ ದಾಟಲು ಸಾಧ್ಯವಾಗುತ್ತಿಲ್ಲ. ಮಕ್ಕಳಿಗೆ ಕಷ್ಟಪಟ್ಟು ಓದಿಸುತ್ತಿದ್ದೇವೆ, ಅಕ್ರಮ ಮರಳು ಗಾರಿಕೆಯ ಬಗ್ಗೆ ಕೊಣಾಜೆ ಠಾಣೆಗೆ ದೂರು ನೀಡಿದರೆ. ನೀವು ಕೈಕಂಬ ಬಳಿಯ ಠಾಣೆಗೆ ದೂರು ನೀಡಬೇಕು ಎನ್ನುತ್ತಾರೆ. ನಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳುವುದು ’’ ಎಂದು ಸ್ಥಳೀಯ ನಿವಾಸಿ ಲವಿನಾ ಡಿ ಸೋಜ ತಿಳಿಸಿದ್ದಾರೆ.
ಪಾವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಫಿರೋಝ್ ಉಳಿಯ ಪ್ರದೇಶದ ಜನರ ಸಮಸ್ಯೆಯನ್ನು ಸಭೆಯ ಮುಂದಿಟ್ಟರು. ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಸಹ್ಯಾದ್ರಿ ಸಂಸ್ಥೆಯ ವಿದ್ಯಾರ್ಥಿಗಳ ತಂಡ ಟ್ರೀಮ್ ಟ್ರಿಗೋನ್ ಅಧ್ಯಯನ ನಡೆಸಿ, ಸಮಸ್ಯೆ ಪರಿಹಾರಕ್ಕೆ ನೇರವಾಗಿ ಕಾರ್ಯಾಚರಣೆಗೆ ಇಳಿದಿರುವುದು ಶ್ಲಾಘನೀಯ ಎಂದರು.
ಉಳಿಯ ಪ್ರದೇಶದ ಜನರಿಗೆ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಲು ಜಿಲ್ಲಾ ಪಂಚಾಯತ್‌ನಿಂದ ಅನುದಾನ ನೀಡಬೇಕೆಂದು ಕೋರಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಉಮೇಶ್ , ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾನಂದ, ಪಾವೂರು ಉಪಾಧ್ಯಕ್ಷೆ ಲೀಲಾವತಿ, ಜಿಲ್ಲಾ ಪಂಚಾಯತ್ ಸ್ವಚ್ಛತಾ ಸಂಯೋಜಕಿ ಮಂಜುಳಾ, ಜಿಲ್ಲಾ ಅಲ್ಪ ಸಂಖ್ಯಾತರ ಇಲಾಖೆಯ ಅಧಿಕಾರಿ ಉಸ್ಮಾನ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.







