ಸಿಸಿ ಕ್ಯಾಮರಾ ಅಳವಡಿಕೆಯಿಂದ ಅಪರಾಧ ತಡೆಗಟ್ಟಲು ಸಾದ್ಯ: ಎಸ್‌ಪಿ ಅಣ್ಣಾಮಲೈ

ಮೂಡಿಗೆರೆ, ಮೇ.26: ಜಾನುವಾರುಗಳ ಸಹಿತ ವಿವಿಧ ರೀತಿಯ ಕಳ್ಳತನ ತಡೆಗಟ್ಟಲು ಕೆಲ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಇದು ಅಪರಾಧಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ತಿಳಿಸಿದರು.
ಅವರು ಇಲ್ಲಿನ ಬಸ್ ನಿಲ್ದಾಣ ಹಾಗೂ ಲಯನ್ಸ್ ವೃತ್ತಕ್ಕೆ ಅಳವಡಿಸಲಾದ ಸಿ.ಸಿ.ಟಿವಿ ಕ್ಯಾಮರಾವನ್ನು ಉದ್ಘಾಟಿಸಿದ ನಂತರ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗಿಡಗಳನ್ನು ನೆಟ್ಟು ನಂತರ ಮಾತನಾಡಿದರು. ಈಗಾಗಲೇ ಎಲ್ಲಾ ಪೊಲೀಶ್ ಠಾಣೆಗಳಲ್ಲಿ ಹಾಗೂ ಹ್ಯಾಂಡ್‌ಪೋಸ್ಟ್‌ನಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ.
ಗೋಣಿಬೀಡು-ಜನ್ನಾಪುರ-ಕೊಟ್ಟಿಗೆಹಾರಗಳಲ್ಲಿ ಜನಸಂದಣಿ ಪ್ರದೇಶಗಳಲ್ಲಿ ಕ್ಯಾಮೆರಾ ಅಳವಡಿಸಲಾಗುವುದು. ಕ್ಯಾಮೆರಾ ಕಣ್ಗಾವಲಿನಲ್ಲಿ ಅಪರಾಧಗಳನ್ನು ಸುಲಭವಾಗಿ ಪತ್ತೆಹಚ್ಚಬಹುದು ಎಂದು ತಿಳಿಸಿದರು.
ಪಟ್ಟಣದ ಡಿಎಸ್‌ಬಿಜಿ ಕಾಲೇಜು ಬಳಿ ನಡೆಯುತ್ತಿರುವ ವಾರದ ಸಂತೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಸತ್ಯವತಿ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಪಟ್ಟಣದಲ್ಲಿ ವಾಹನದಟ್ಟಣೆ ಹಾಗೂ ಟ್ರಾಫಿಕ್ ಸಮಸ್ಯೆ ಮುತುವರ್ಜಿ ವಹಿಸಲಾಗುವುದು. ಎಂ.ಜಿ.ರಸ್ತೆ, ಕೆ.ಎಂ.ರಸ್ತೆ ಹಾಗೂ ಜೆ.ಎಂ.ರಸ್ತೆ ಮಾರ್ಕೆಟ್ ರಸ್ತೆ ಸಹಿತ ಹಲವು ರಸ್ತೆ ಕಿರಿದಾಗಿರುವುದರಿಂದ ಹಗಲು ಹೊತ್ತಿನಲ್ಲಿ ಅಂಗಡಿಗಳಿಗೆ ಲಾರಿಗಳನ್ನು ನಿಲ್ಲಿಸಿಕೊಂಡು ಸರಕು ಇಳಿಸಬಾರದು. ರಾತ್ರಿವೇಳೆ ಸರಕುಗಳನ್ನು ವರ್ತಕರು ಇಳಿಸಿಕೊಳ್ಳಬೇಕು. ಹಗಲು ವೇಳೆ ಟ್ರಾಕ್ಟರ್, ಟಿಲ್ಲರ್‌ಗಳು ಪಟ್ಟಣದ ರಸ್ತೆಗಳಲ್ಲಿ ಸಂಚರಿಸುವುದರಿಂದ ಟ್ರಾಫಿಕ್ ನಿಯಂತ್ರಣ ಕಷ್ಟವಾಗುತ್ತಿದೆ. ಆದ್ದರಿಂದ ಹಗಲು ವೇಳೆ ಇಂತಹ ವಾಹನ ಪ್ರವೇಶಿಸಲು ಸಮಯ ನಿಗದಿಪಡಿಸಿಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪಟ್ಟಣಕ್ಕೆ ಟ್ರಾಫಿಕ್ ಠಾಣೆ ನಿರ್ಮಾಣಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದ ಅವರು ಪೊಲೀಸ್ ಗಸ್ತುಗಳನ್ನು ಹೆಚ್ಚಿಸಲಾಗುವುದು. ಸಿಬ್ಬಂದಿಗಳ ಕೊರತೆ ಬಗ್ಗೆ ವರದಿ ನೀಡಲಾಗಿದೆ. ಶೀಘ್ರದಲ್ಲೇ ತುಂಬಲಾಗುವುದು ಬಾಕಿ ಇರುವ ವಿವಿಧ ಕಳ್ಳತನ ಪ್ರಕರಣವನ್ನು ಬೇಧಿಸುವುದಾಗಿ ತಿಳಿಸಿದರು.
ಈ ವೇಳೆ ಹಿರಿಯ ಕಾಫಿ ಬೆಳೆಗಾರ ಡಿ.ಎಸ್.ಸುಬ್ಬೇಗೌಡ, ಕೊಪ್ಪ ಡಿವೈಎಸ್‌ಪಿ ರವಿನಾಯಕ್, ಕೊಪ್ಪ ವೃತ್ತ ನಿರೀಕ್ಷಕ ಸತ್ಯನಾರಾಯಣ, ಮೂಡಿಗೆರೆ ವೃತ್ತ ನಿರೀಕ್ಷಕ ಜಗದೀಶ್, ಪಿಎಸ್‌ಐ ರಫೀಕ್ ಇದ್ದರು.







