ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯ ಆಯ್ಕೆ : ವಿಪಕ್ಷಗಳ ಸಭೆಗೆ ಬಾರದೆ ಪ್ರಧಾನಿ ಔತಣಕೂಟದಲ್ಲಿ ಪಾಲ್ಗೊಂಡ ನಿತೀಶ್

ಹೊಸದಿಲ್ಲಿ, ಮೇ 26: ರಾಷ್ಟ್ರಪತಿ- ಉಪರಾಷ್ಟ್ರಪತಿ ಹುದ್ದೆಗೆ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಉದ್ದೇಶದಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಯೋಜಿಸಿದ್ದ ಸಭೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೈರು ಹಾಜರಾಗಿದ್ದುದು ಗಮನಾರ್ಹವಾಗಿತ್ತು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಆಯೋಜಿಸಿದ್ದ ಔತಣಕೂಟದಲ್ಲಿ ನಿತೀಶ್ ಕುಮಾರ್ ಪಾಲ್ಗೊಂಡಿರುವುದು ಸಾಕಷ್ಟು ಊಹಾಪೋಹಕ್ಕೆ ಕಾರಣವಾಯಿತು.
ಆದರೆ ಈ ಊಹಾಪೋಹವನ್ನು ನಿರಾಕರಿಸಿರುವ ನಿತೀಶ್, ಈ ಸಭೆಗೆ ಬರಲಾಗುವುದಿಲ್ಲ ಎಂದು ನಾಲ್ಕು ದಿನಗಳ ಹಿಂದೆಯೇ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್‌ಗೆ ತಿಳಿಸಿದ್ದೆ. ಮತ್ತು ಜೆಡಿಯು ಪಕ್ಷದ ಪ್ರತಿನಿಧಿಯಾಗಿ ಶರದ್ ಯಾದವ್ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಮಾರಿಷಸ್ ಪ್ರಧಾನಿಯ ಗೌರವಾರ್ಥ ಹಮ್ಮಿಕೊಂಡ ಔತಣಕೂಟದಲ್ಲಿ ನಾನು ಪಾಲ್ಗೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ , ರಾಷ್ಟ್ರಪತಿ-ಉಪರಾಷ್ಟ್ರಪತಿ ಹುದ್ದೆಗೆ ಸರ್ವ ಸಮ್ಮತ ಅಭ್ಯರ್ಥಿಯನ್ನು ಆರಿಸುವ ನಿಟ್ಟಿನಲ್ಲಿ ಯಾವುದೇ ಉಪಕ್ರಮಕ್ಕೆ ಮುಂದಾಗದಿರುವ ಬಗ್ಗೆ ಬಿಜೆಪಿಯನ್ನು ದೂಷಿಸಿದ ಪ್ರತಿಪಕ್ಷಗಳು, ಆಡಳಿತ ಪಕ್ಷ ಸರ್ವ ಸಮ್ಮತ ಅಭ್ಯರ್ಥಿಯ ಬಗ್ಗೆ ಒಲವು ತೋರದಿದ್ದಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದವು.
ದೇಶದ ಉನ್ನತ ಹುದ್ದೆಗೆ ನಡೆಯುವ ಈ ಚುನಾವಣೆಯಲ್ಲಿ ಆಡಳಿತ ಪಕ್ಷವು ಸರ್ವಸಮ್ಮತ ಅಭ್ಯರ್ಥಿಯ ಹೆಸರು ಸೂಚಿಸಿ ಪ್ರತಿಪಕ್ಷಗಳ ಒಟ್ಟಾಭಿಪ್ರಾಯ ಕೇಳುವುದು ಇದುವರೆಗೆ ನಡೆದು ಬಂದಿರುವ ಪದ್ದತಿಯಾಗಿದೆ. ಆದರೆ ಈ ಬಾರಿ ಇಂತಹ ಉಪಕ್ರಮಕ್ಕೆ ಆಡಳಿತ ಪಕ್ಷ ಮುಂದಾಗಿಲ್ಲ. ಹೀಗಾದರೆ ನಾವು ದೇಶದ ಸಂವಿಧಾನದ ಆಶಯಗಳನ್ನು ಸಮರ್ಥಿಸಿಕೊಳ್ಳಬಲ್ಲ ಓರ್ವ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಾದೀತು ಎಂಬ ಸಭೆಯ ನಿರ್ಣಯವನ್ನು ರಾಜ್ಯಸಭೆಯಲ್ಲಿ ವಿಪಕ್ಷಗಳ ಮುಖಂಡ ಗುಲಾಂ ನಬಿ ಆಝಾದ್ ಓದಿ ಹೇಳಿದರು.







