ಕೇಂದ್ರದ 3 ವರ್ಷಗಳ ಸಾಧನೆ ಬಾಯಿ ಬಡಾಯಿ ಮಾತ್ರ: ಸಚಿವ ರೈ

ಮಂಗಳೂರು, ಮೇ 27: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಬಣ್ಣ ಬಣ್ಣದ ಭರವಸೆಯ ಬಲೂನುಗಳನ್ನು ಜನರ ಕೈಗಿಡುತ್ತಾ ಕಳೆದ ಮೂರು ವರ್ಷಗಳಲ್ಲಿ ಬಾಯಿ ಬಡಾಯಿ ಸಾಧನೆಯನ್ನು ಮಾತ್ರವೇ ಮಾಡಿದೆ ಹೊರತು ಸಾಧನೆ ಕಳಪೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಟೀಕಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಯುಪಿಎ ಸರಕಾರ ಜಿಎಸ್‌ಟಿ ಜಾರಿಗೆ ತಂದಾಗ ಅದನ್ನು ವಿರೋಧಿಸಲಾಯಿತು. ಇದೀಗ ನಾವೇ ಅದನ್ನು ಜಾರಿಗೊಳಿಸಿರುವುದಾಗಿ ಎನ್‌ಡಿಎ ಸರಕಾರ ಕೊಚ್ಚಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಧಾರ್ ಬಗ್ಗೆಯೂ ಅಪಸ್ವರ ಎತ್ತಲಾಗಿತ್ತು. ಇದೀಗ ಎಲ್ಲದಕ್ಕೂ ಆಧಾರ್ ಕಡ್ಡಾಯವಾಗಿದೆ. ಯುಪಿಎ ದೇಶದ ಹಿತದೃಷ್ಟಿಯಿಂದ ಕೈಗೊಂಡ ಯೋಜನೆಗಳಿಗೆ ಹಿಂದೆ ವಿಪಕ್ಷವಾಗಿದ್ದ ಎನ್‌ಡಿಎ ವಿರೋಧ ಮಾಡುತ್ತಲೇ ಬಂದಿತ್ತು. ಈಗ ಅವುಗಳನ್ನು ಮುಂದುವರಿಸುತ್ತಿದೆ ಎಂದರು.
ಕೇಂದ್ರ ಸರಕಾರವು 500 ರೂ. ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ್ದರಿಂದ ಆರು ತಿಂಗಳು ಕಳೆದರೂ ಉತ್ಪದನಾ ವಲಯ ಚೇತರಿಸಿಕೊಂಡಿಲ್ಲ. ಕೈಗಾರಿಕಾ ಉತ್ಪಾದನಾ ಕೋಷ್ಠಕ (ಐಐಪಿ)ದ ಅಂಕಿ ಅಂಶಗಳನ್ನೇ ಆಧರಿಸಿ ಹೇಳುವುದಾದರೆ ಜನವರಿಯಲ್ಲಿ ಶೇ.3 ಇದ್ದ ಸಾಂಪ್ರದಾಯಿಕ ಉತ್ಪಾದನಾ ವಲಯದ ವೃದ್ಧಿ ದರ, ಫೆಬ್ರವರಿಯಲ್ಲಿ ಶೇ.1.4ಕ್ಕೆ ಇಳಿದಿದೆ. ಮಾರ್ಚ್‌ನಲ್ಲಿ ಇದು ಶೇ. 1.2ಕ್ಕೆ ಇಳಿಕೆಯಾಗಿದೆ. ಉತ್ಪಾದನಾ ದರ ಕುಸಿಯುವುದರಿಂದ ಸಹಜವಾಗಿಯೇ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ. ಕಾಶ್ಮೀರ ಸಮಸ್ಯೆಗೂ ನೋಟು ರದ್ಧತಿಯಿಂದ ಪರಿಹಾರ ದೊರಕಲಿದೆ ಎಂದು ಹೇಳಿಕೊಳ್ಳಲಾಯಿತು. ಆದರೆ ಕಳೆದ ಎರಡು ದಶಕಗಳಲ್ಲಿ ಕಾಣದ ಪ್ರಕ್ಷುಬ್ಧತೆ ಇಂದು ಕಾಶ್ಮೀರವನ್ನು ಕಾಡುತ್ತಿದೆ. ನೋಟು ರದ್ದತಿಯಿಂದ ನಕ್ಸಲಿಸಂ ಸಂಪೂರ್ಣ ನಾಶವಾಗುತ್ತೆ ಎಂದು ಹೇಳಲಾಯಿತು. ಆದರೆ ಈ ಹೇಳಿಕೆ ನೀಡಿದ ಕೆಲವೇ ತಿಂಗಳಲ್ಲಿ ನಕ್ಸಲರು ಭೀಕರ ದಾಳಿ ನಡೆಸಿ 25 ಸಿಆರ್‌ಪಿಎಫ್ ಯೋಧರನ್ನು ಹತ್ಯೆ ಮಾಡಿದರು ಎಂದು ಅವರು ವಿಷಾದಿಸಿದರು.
ಗೋರಕ್ಷಣೆ, ಗೋಭಕ್ಷಣೆ, ಗೋಸಾಗಾಟದ ಹೆಸರಿನಲ್ಲಿ ದೇಶದಲ್ಲೆಡೆ ಕೋಮುಪ್ರೇರಿತ ಗಲಭೆಗಳನ್ನು ಸೃಷ್ಟಿಸಿ ಮತೀಯ ಧ್ರುವೀಕರಣದ ಹುನ್ನಾರ ನಡೆಯುತ್ತಿದೆ. ಆಹಾರ, ವಸ್ತ್ರಗಳ ವಿಚಾರಗಳ್ನು ಮುಂದಿಟ್ಟು ಬಡತನ, ಹಸಿವು ಮೊದಲಾದ ನೈಜ ವಿಷಯಗಳನ್ನ ಮರೆಮಾಚಲಾಗುತ್ತಿದೆ. ಮೋದಿಯವರ ವಿದೇಶಾಂಗ ನೀತಿಯಿಂದ ಸಾರ್ಕ್ ರಾಷ್ಟ್ರಗಳ ಜತೆಗಿನ ಸ್ನೇಹವನ್ನು ವೃದ್ಧಿಸುವಲ್ಲಿ ಪರಿಣಾಮಕಾರಿಯಾಗಿಲ್ಲ. ಇದರಿಂದಾಗಿ ನೇಪಾಳ ಕೂಡಾ ಇಂದು ಚೀನಾದತ್ತ ಮುಖ ಮಾಡಿದೆ. ಮೋದಿಯವರು ಅಮೆರಿಕವನ್ನು ಅತಿಯಾಗಿ ಓಲೈಸಲು ಹೊರಟ ಪರಿಣಾಮವಾಗಿ ರಶ್ಯ ಇಂದು ಭಾರತದಿಂದ ದೂರವಾಗುತ್ತಿದೆ. ಕಳೆದ 70 ವರ್ಷಗಳ ಅವಧಿಯಲ್ಲಿ ಮೊದಲ ಬಾರಿ ರಶ್ಯವು ಪಾಕಿಸ್ತಾನದ ಜತೆ ಜಂಟಿ ಸಮರಾಭ್ಯಾಸದ ಮೂಲಕ ಭಾರತಕ್ಕೆ ಅಪಾಯದ ಸಂದೇಶವನ್ನು ನೀಡಿದೆ. ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ರೈತರ ಬೆಳೆಗಳಿಗೆ ಶೇ.50 ಬೆಂಬಲ ಬೆಲೆ ಕೊಡುವುದಾಗಿ ಘೋಷಿಸಿತ್ತು. ಆದರೆ 2015ರ ಫೆಬ್ರವರಿ 20ರಲ್ಲಿ ಕೇಂದ್ರ ಸರಕಾರ ರೈತರಿಗೆ ಬೆಂಬಲ ಬೆಲೆ ಕೊಡಲಾಗದು ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ಗ್ರಾಮೀಣ ಭಾಗದ ಜನರಿಗೆ ಉದ್ಯೋಗದ ಭರವಸೆ ನೀಡಿದ್ದ ಉದ್ಯೋಗ ಖಾತ್ರಿ ಯೋಜನೆ ಎನ್‌ಡಿಎ ಅವಧಿಯಲ್ಲಿ ನಿರ್ಲಕ್ಷಕ್ಕೆ ಒಳಗಾಗಿದೆ ಎಂದು ಎನ್‌ಡಿಎ ಸರಕಾರದ ವೈಫಲ್ಯವನ್ನು ಸಚಿವ ರೈ ಎಳೆಎಳೆಯಾಗಿ ವಿವರಿಸಿದರು.
ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ
ದೇಶದ ಬಿಜೆಪಿಯೇತರ ಅದರಲ್ಲೂ ವಿಶೇಷವಾಗಿ ಕರ್ನಾಟಕದ ಬಗ್ಗೆ ಮತ್ತು ಜನತೆ ಬಗ್ಗೆ ಕೇಂದ್ರ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಬರ ಪರಿಹಾರ, ಮಹಾದಾಯಿ ನದಿ ನೀರು ಹಂಚಿಕೆ, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಕರ್ನಾಟಕವನ್ನು ಕಡೆಗಣಿಸಿದೆ. ದಲಿತ, ಕಾರ್ಮಿಕ ಸಮುದಾಯವನ್ನು ನಿರ್ಲಕ್ಷಿಸಿರುವ ಕೇಂದ್ರ ಸರಕಾರ, ಮಹಿಳಾ ಮೀಸಲಾತಿ ಮಸೂದೆ ಕುರಿತಂತೆಯೂ ನಿರಾಸಕ್ತಿ ವಹಿಸಿದೆ ಎಂದು ಸಚಿವ ರೈ ದೂರಿದರು.
ಈ ಎಲ್ಲಾ ಅಂಶಗಳನ್ನು ಗಮನಿಸುವಾಗ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕೇಂದ್ರ ಸರಕಾರದ ಸಾಧನೆ ಶೂನ್ಯವಾಗಿರುವುದು ಗೋಚರಿಸುವುದಲ್ಲದೆ, ಆಡಳಿತದಲ್ಲೂ ವಿಫಲವಾಗಿರುವುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಜೆ.ಆರ್. ಲೋಬೊ, ಮೇಯರ್ ಕವಿತಾ ಸನಿಲ್, ಉಪ ಮೇಯರ್ ರಜನೀಶ್, ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಮೂಡಾ ಅಧ್ಯಕ್ಷ ಸುರೇಶ್ ಬಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಮನಪಾ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಸೇವಾದಳದ ಅಶ್ರಫ್, ಮಾಜಿ ಮೇಯರ್ ಹರಿನಾಥ್ ಮೊದಲಾದವರು ಉಪಸ್ಥಿತರಿದ್ದರು.







