ಈ ಸಚಿವರ ಅಡುಗೆಯವನ ಬ್ಯಾಂಕ್ ಖಾತೆಯಲ್ಲಿರುವುದು 5,000 ರೂ., ಸಿಕ್ಕಿದ್ದು 26 ಕೋಟಿ ರೂ. ಮರಳು ಗಣಿಗಾರಿಕೆ ಅನುಮತಿ !

ಚಂಡೀಗಢ, ಮೇ 27: ಪಂಜಾಬ್ ಸರಕಾರ ಇತ್ತೀಚೆಗೆ ಮರಳುಗಾರಿಕೆ ಹಕ್ಕುಗಳ ಹರಾಜು ಮಾಡಿದಾಗ 26 ಕೋ.ರೂ.ಗೆ ಬಿಡ್ ಸಲ್ಲಿಸಿ ಮರಳುಗಾರಿಕೆ ಹಕ್ಕು ಪಡೆದಿದ್ದ ವ್ಯಕ್ತಿಯೊಬ್ಬ ಕಳೆದ ಮೂರು ವರ್ಷಗಳಲ್ಲಿ ರೂ.1 ಲಕ್ಷಕ್ಕಿಂತಲೂ ಕಡಿಮೆ ಐಟಿ ರಿಟರ್ನ್ಸ್ ಪಾವತಿಸುತ್ತಿದ್ದಾರೆಂದು ತಿಳಿದು ಬಂದಿದೆ.
ಅಂದ ಹಾಗೆ ಈ ವ್ಯಕ್ತಿಯ ಹೆಸರು ಅಮಿತ್ ಬಹಾದ್ದೂರ್. 36 ವರ್ಷದ ಈತ ಪಂಜಾಬ್ ಇಂಧನ ಮತ್ತು ನೀರಾವರಿ ಸಚಿವ ರಾನಾ ಗುರ್ಜಿತ್ ಅವರ ಕಂಪೆನಿಯ ಮಾಜಿ ಅಡುಗೆಯಾಳು. ಆಸಕ್ತಿಯ ವಿಚಾರವೇನೆಂದರೆ ಈ ವ್ಯಕ್ತಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಲ್ಲಿ ಎಪ್ರಿಲ್ 1ರಂದು ಇದ್ದ ಬ್ಯಾಲೆನ್ಸ್ ಕೇವಲ ರೂ.4,840. ಆತನ ಬ್ಯಾಂಕ್ ಖಾತೆಯಲ್ಲಿ ಕಳೆದ ಒಂದು ವರ್ಷದಲ್ಲಿ ಯಾವುದೇ ಸಮಯದಲ್ಲಿ ರೂ.18,000ರಿಂದ ರೂ.22,000ಕ್ಕಿಂತ ಹೆಚ್ಚಿನ ಹಣವಿರಲಿಲ್ಲ. ಆತನ ಮುಖ್ಯ ಆರ್ಥಿಕ ಮೂಲ ಆತ ಪಡೆಯುವ ವೇತನವಾದ ರೂ.11,706 ಆಗಿದ್ದು, ಇದನ್ನು ಆತ ಕೊನೆಯ ಬಾರಿ ಮಾರ್ಚ್ 8ರಂದು ಪಡೆದಿದ್ದ.
ಮರಳುಗಾರಿಕೆ ಬಿಡ್ ಪಡೆದ ನಂತರ ಆತ ಮೊದಲ ಕಂತಿನ ಹಣವಾದ ರೂ.13.34 ಕೋಟಿ ಪಾವತಿಸಿದ್ದ. ಆತ ಮರಳುಗಾರಿಕೆ ನಡೆಸಲು ಪಂಜಾಬ್ ರಾಜ್ಯದ ನವನ್ ಶಹರ್ ಇಲ್ಲಿನ ಸೈದ್ ಪುರ್ ಖುರ್ದ್ ಸೈಟ್ ಪಡೆದಿದ್ದ.
ಆದರೆ ಮೊರಾದಾಬಾದ್ ನ ಬಿಲಾರಿ ನಿವಾಸಿಯಾದ ಆತನ ಸುತ್ತ ವಿವಾದ ಹರಡುತ್ತಿದ್ದಂತೆಯೇ ಆತನ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಆಗಿದೆ. ಆದರೆ ಮೂಲಗಳ ಪ್ರಕಾರ ರಾಜ್ಯದ ಅತ್ಯಂತ ಶ್ರೀಮಂತ ಶಾಸಕರಾಗಿರುವ ಗುರ್ಜಿತ್ ಅವರು ಬಹಾದ್ದೂರ್ ಮೂಲಕ ತಮ್ಮ ಕಾರ್ಯ ಸಾಧಿಸುತ್ತಿದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯ ರೂ.169 ಕೋಟಿ ಆಗಿದ್ದು ಅವರು ತರ್ನ್ ತರ್ನ್ ನಲ್ಲಿ ಸಕ್ಕರೆ ಡಿಸ್ಟಿಲ್ಲರಿ ಕೂಡ ಹೊಂದಿದ್ದಾರೆ.
ಆದರೆ ಈ ವಿಚಾರವನ್ನು ಗುರ್ಜಿತ್ ಒಪ್ಪುತ್ತಿಲ್ಲ. ನನ್ನ ಬಳಿ ಸಾವಿರಾರು ಮಂದಿ ಕೆಲಸ ಮಾಡಿದ್ದಾರೆ ಹಾಗೂ ಹವರು ಕೆಲಸ ತ್ಯಜಿಸಿದ್ದಾರೆ ಕೂಡ. ಅವರೆಲ್ಲಾ ಉದ್ಯೋಗ ತ್ಯಜಿಸಿದ ನಂತರ ಏನು ಮಾಡುತ್ತಿದ್ದಾರೆಂಬುದಕ್ಕೆ ನಾನು ಜವಾಬ್ದಾರನಲ್ಲ ಎಂದು ಅವರು ಹೇಳುತ್ತಿದ್ದಾರೆ.







