ಜಲೀಲ್ ಕರೋಪಾಡಿ ಕೊಲೆ ಪ್ರಕರಣ: ಸಿಒಡಿ ತನಿಖೆಗೆ ಆಗ್ರಹಿಸಿ ಪಿಎಫ್ಐ ಮನವಿ

ಬಂಟ್ವಾಳ, ಮೇ 27: ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎ.ಅಬ್ದುಲ್ ಜಲೀಲ್ ಕೊಲೆ ಪ್ರಕರಣವನ್ನು ಸಿಒಡಿ ತನಿಖೆ ಒಪ್ಪಿಸಬೇಕೆಂದು ಆಗ್ರಹಿಸಿ ವಿಟ್ಲದಲ್ಲಿ ಇಂದು ಹಮ್ಮಿಕೊಂಡ ಧರಣಿಯನ್ನು ನಿಷೇಧಾಜ್ಞೆಯ ಹಿನ್ನೆಲೆಯಲ್ಲಿ ಮುಂದೂಡಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿ ತನ್ನ ಬೇಡಿಕೆಗಳನ್ನು ಈಡೇರಿಸುವಂತೆ ಬಂಟ್ವಾಳ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಶನಿವಾರ ಮನವಿ ಸಲ್ಲಿಸಿತು.
ಸಮಾಜದಲ್ಲಿ ಎಲ್ಲ ಜಾತಿ, ಧರ್ಮದವರೊಂದಿಗೆ ಅನೋನ್ಯತೆಯಿಂದ ಬಾಳುತ್ತಿದ್ದ ಜಲೀಲ್ ಕರೋಪಾಡಿ ರಾಜಕೀಯವಾಗಿ ಬೆಳೆಯುತ್ತಿರುವುದನ್ನು ಸಹಿಸದ ಕೆಲವು ಶಕ್ತಿಗಳು ಅವರನ್ನು ಹಾಡಹಗಲೇ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಬರ್ಬರವಾಗಿ ಹತ್ಯೆ ನಡೆಸಿರುವುದು ಆತಂಕಕಾರಿ ಸಂಗತಿಯಾಗಿದೆ. ಹತ್ಯೆಯಲ್ಲಿ ನೇರ ಭಾಗಿಯಾದ 11 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರೂ ಹತ್ಯೆಯ ಹಿಂದಿರುವ ಪ್ರಮುಖ ರೂವಾರಿಗಳನ್ನು ತಿಂಗಳು ಕಳೆದರೂ ಬಂಧಿಸಲು ಪೊಲೀಸರು ಆಸಕ್ತಿ ವಹಿಸದಿರುವುದು ಖಂಡನೀಯವಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಜಲೀಲ್ ಕೊಲೆ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಲು ರಾಜ್ಯ ಸರಕಾರ ಕೂಡಲೇ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಬೇಕು. ಹತ್ಯೆಯ ಹಿಂದಿರುವ ಪ್ರಮುಖರನ್ನು ಕೂಡಲೇ ಬಂಧಿಸಬೇಕು. ಅಲ್ಲದೆ ಕೊಲೆಯ ಕೆಲವು ದಿನಗಳ ಬಳಿಕ ಕರೋಪಾಡಿ ಗ್ರಾಮದ ಪೊದೆಯೊಂದರಲ್ಲಿ ಎರಡು ದ್ವಿಚಕ್ರ ವಾಹನ ಮತ್ತು ಮಾರಕಾಸ್ತ್ರಗಳು ಪತ್ತೆಯಾದ ಪ್ರಕರಣವನ್ನೂ ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿರುವ ಪಿಎಫ್‌ಐ, ಕೊಲೆ ನಡೆಯುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬನಿಗೆ ಮೊದಲೇ ತಿಳಿದಿತ್ತು ಎಂಬ ಬಗ್ಗೆ ಪತ್ರಿಕೆಗಳು ವರದಿ ಮಾಡಿದ್ದು ಕೂಡಲೇ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಿ ಸೂಕ್ತ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದೆ.
ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಗ್ರಾಪಂ ಕಚೇರಿಯಲ್ಲೇ ಕೊಲೆಯಾದ ಅಬ್ದುಲ್ ಜಲೀಲ್ ಕರೋಪಾಡಿಯವರ ಕುಟುಂಬಕ್ಕೆ ರಾಜ್ಯ ಸರಕಾರ ಶೀಘ್ರವೇ 75 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಅಲ್ಲದೆ ಜಲೀಲ್ ಕರೋಪಾಡಿಯವರ ತಂದೆ ತಾಲೂಕು ಪಂಚಾಯತ್ ಸದಸ್ಯ ಉಸ್ಮಾನ್ ಹಾಜಿ ಕರೋಪಾಡಿಯವರಿಗೆ ಭೂಗತ ಪಾತಾಕಿಗಳ ಬೆದರಿಕೆ ಇರುವುದರಿಂದ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಪಿಎಫ್‌ಐ ಬಂಟ್ವಾಳ ತಾಲೂಕು ಅಧ್ಯಕ್ಷ ಇಜಾರ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಸಲೀಂ ಕುಂಪನಮಜಲು, ವಿಟ್ಲ ವಲಯ ಅಧ್ಯಕ್ಷ ಕಮರುದ್ದೀನ್ ಪುಣಚ್ಚ, ಪ್ರಮುಖರಾದ ಶಕೀರ್ ಅಳಕೆಮಜಲು, ಇಸಾಕ್ ಶಾಂತಿಅಂಗಡಿ ಮೊದಲಾದವರು ಉಪಸ್ಥಿತರಿದ್ದರು.
ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎ.ಅಬ್ದುಲ್ ಜಲೀಲ್ ಕೊಲೆಯನ್ನು ಖಂಡಿಸಿ ಪಿಎಫ್‌ಐ ಬಂಟ್ವಾಳ ತಾಲೂಕು ಸಮಿತಿಯಿಂದ ಶನಿವಾರ ಮಧ್ಯಾಹ್ನ ವಿಟ್ಲದಲ್ಲಿ ಹಮ್ಮಿಕೊಂಡ ಪ್ರತಿಭಟನೆಯು ನಿಷೇಧಾಜ್ಞೆಯ ಹಿನ್ನೆಲೆಯಲ್ಲಿ ರದ್ದುಗೊಂಡಿತ್ತು. ಆದರೆ ಈ ಮಾಹಿತಿ ತಿಳಿಯದ ನೂರಾರು ಕಾರ್ಯಕರ್ತರು ಮೇಗಿನಪೇಟೆಯಲ್ಲಿ ಜಮಾಯಿಸ ತೊಡಗಿದ್ದರು. ಇಲ್ಲಿಗೆ ಆಗಮಿಸಿದ ಪಿಎಫ್‌ಐ ನಾಯಕರು ಕಾರ್ಯಕರ್ತರಿಗೆ ಮನವರಿಗೆ ಮಾಡಿ ವಾಸಪ್ ಕಳುಹಿಸಿದರು. ಆ ಬಳಿಕವೂ ವಿಟ್ಲಕ್ಕೆ ಹಲವು ಕಾರ್ಯಕರ್ತರು ಬರುತ್ತಿದ್ದಂತೆ ಪ್ರತಿಭಟನೆ ರದ್ದುಗೊಂಡ ವಿಷಯ ತಿಳಿದು ವಾಪಾಸಾಗುತ್ತಿದ್ದ ದೃಶ್ಯಗಳು ಕಂಡು ಬಂತು. ನಿಷೇದಾಜ್ಞೆಯಿಂದ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಪಿಎಫ್‌ಐ ಬಂಟ್ವಾಳ ತಾಲೂಕು ಪ್ರಧಾನ ಕಾರ್ಯದರ್ಶಿ ಸಲೀಂ ಕುಂಪನಮಜಲು ತಿಳಿಸಿದ್ದಾರೆ.







