ದ.ಕ.ಜಿಲ್ಲೆಯಲ್ಲಿ ಪೌರ ಕಾರ್ಮಿಕರ ಸ್ಥಿತಿ ಉತ್ತಮವಾಗಿಲ್ಲ: ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಹೇಳಿಕೆ
ಸುರಕ್ಷಾ ಪರಿಕರ ವಿತರಿಸದ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ

ಮಂಗಳೂರು, ಮೇ 27: ವಿದ್ಯಾವಂತರ ಜಿಲ್ಲೆ ಎಂದು ಹೇಳಿಕೊಳ್ಳುವ ದ.ಕ.ಜಿಲ್ಲೆಯಲ್ಲಿ ಪೌರ ಕಾರ್ಮಿಕರ ಸ್ಥಿತಿ ಉತ್ತಮವಾಗಿಲ್ಲ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಕೆಲಸಗಳನ್ನು ಮಾಡುತ್ತಿರುವ ಪೌರ ಕಾರ್ಮಿಕರಿಗೆ ಸುರಕ್ಷಾ ಪರಿಕರಗಳನ್ನು ವಿತರಿಸದಿರುವ ಬಗ್ಗೆ ದೂರುಗಳು ಬಂದಿವೆ. ಆ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮಗಳನ್ನು ಜರಗಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಹೇಳಿದ್ದಾರೆ.
ಮನಪಾ ಮಂಗಳಾ ಸಭಾಂಗಣದಲ್ಲಿ ಶನಿವಾರ ನಡೆದ ಪೌರ ಕಾರ್ಮಿಕರೊಂದಿಗೆ ನೇರ ಸಂವಾದ ಕಾರ್ಯಕ್ರಮದ ಬಳಿಕ ಕರೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪೌರ ಕಾರ್ಮಿಕರನ್ನು ದುಡಿಸಿಕೊಳ್ಳುವ ಗುತ್ತಿಗೆದಾರರು ಅವರಿಗೆ ನಿಗದಿತ ಮತ್ತು ನಿಯಮಿತವಾಗಿ ವೇತನವನ್ನು ನೀಡುತ್ತಿಲ್ಲ. ಭವಿಷ್ಯ ನಿಧಿ ಪಾವತಿಸುತ್ತಿಲ್ಲ. ದಿನಕ್ಕೆ 13 ಗಂಟೆ ಕೆಲಸ ಮಾಡಿ ಶೋಷಿಸುತ್ತಿದ್ದಾರೆ. ಈ ಬಗ್ಗೆ ದೂರುಗಳು ಬಂದಿದೆ. ಆ ಹಿನ್ನಲೆಯಲ್ಲಿ ದಲಿತ ದೌರ್ಜನ್ಯ ಕಾಯ್ದೆಯಲ್ಲದೆ 2013ರ ಮ್ಯಾನುಯಲ್ ಸ್ಕಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಎಂ.ಆರ್.ವೆಂಕಟೇಶ್ ನುಡಿದರು.
ಮ್ಯಾನ್ಯುಯಲ್ ಸ್ಕಾವೆಂಜಿಂಗ್ ನಿಷೇಧ ಕಾಯ್ದೆ ಜಾರಿಗೆ ಬಂದು ನಾಲ್ಕು ವರ್ಷವಾಯಿತು. ಆದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ರಾಜ್ಯದ ಕೆಲವು ಅಧಿಕಾರಿಗಳ ಅಸಡ್ಡೆಯಿಂದಾಗಿ ನಾವು ಮುಖ್ಯಮಂತ್ರಿಯ ಅಸಮಾಧಾನಕ್ಕೂ ಗುರಿಯಾಗಬೇಕಾಯಿತು. ದ.ಕ.ಜಿಲ್ಲೆ ಅದರಲ್ಲೂ ಮಂಗಳೂರು ಸುರಕ್ಷತೆಯ ವಿಷಯದಲ್ಲಿ ಉತ್ತಮ ಸ್ಥಿತಿಯಲ್ಲಿದೆ. ಆದರೆ, ಪೌರ ಕಾರ್ಮಿಕರ ಸ್ಥಿತಿ ಮಾತ್ರ ಚಿಂತಾಜನಕವಾಗಿದೆ. ಸರಕಾರದ ಯೋಜನೆಗಳ ಬಗ್ಗೆಯೂ ಹೆಚ್ಚಿನ ಪೌರ ಕಾರ್ಮಿಕರಿಗೆ ಮಾಹಿತಿ ಇಲ್ಲ. ಹಾಗಾಗಿ ಪೌರ ಕಾರ್ಮಿಕರು ವಾಸಿಸುವ ಕಾಲನಿಗಳಿಗೆ ತೆರಳಿ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಎಂ.ಆರ್.ವೆಂಕಟೇಶ್ ನುಡಿದರು.
ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಪೌರ ಕಾರ್ಮಿಕರಿಗೆ ಹೆಚ್ಚು ವೇತನ ನೀಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ಅನೇಕ ಜನಪರ ಯೋಜನೆಗಳನ್ನು ಸಫಾಯಿ ಕರ್ಮಚಾರಿಗಳಿಗಾಗಿ ಆಯೋಜಿಸಿದೆ. ಈ ಸಾಲಿನ ಬಜೆಟ್‌ನಲ್ಲಿ ಸಫಾಯಿ ಕರ್ಮಚಾರಿಗಳ ಕಲ್ಯಾಣಕ್ಕಾಗಿ 800 ಕೋ.ರೂ. ಮೀಸಲಿಟ್ಟಿದೆ. ಸ್ವಾಭಿಮಾನದ ಬದುಕು ಸಾಗಿಸಲು ಸಫಾಯಿ ಕರ್ಮಚಾರಿ ನಿಗಮ ಸ್ಥಾಪಿಸಲಾಗಿದ್ದು, 60 ಕೋ.ರೂ. ಮೀಸಲಿಟ್ಟಿದೆ ಎಂದ ವೆಂಕಟೇಶ್, ಪೌರ ಕಾರ್ಮಿಕರಿಗೆ ಬೆಳಗ್ಗಿನ ಉಪಹಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಕೆಲವು ಕಡೆ ಉಪಹಾರದ ಬದಲು ನೇರ ಹಣ ನೀಡುವ ಪದ್ಧತಿ ಇದೆ. ಅದನ್ನು ಕೈ ಬಿಟ್ಟು ಉಪಹಾರ ನೀಡುವಂತೆ ಸೂಚಿಸಲಾಗಿದೆ ಎಂದರು.
ಪೌರ ಕಾರ್ಮಿಕರ ಮಕ್ಕಳ ವಿದ್ಯಭ್ಯಾಸಕ್ಕೂ ಸರಕಾರ ಹೆಚ್ಚು ಒತ್ತು ನೀಡಿದೆ. ಪ್ರತಿಷ್ಠಿತ ಶಾಲೆಗಳಲ್ಲಿ ಉಚಿತ ಶಿಕ್ಷಣ ಪಡೆಯುವ ಸಲುವಾಗಿ ಈ ಸಮುದಾಯದ ಮಕ್ಕಳಿಗೆ ಶೇ.5ರಷ್ಟು ಸೀಟುಗಳನ್ನು ಮೀಸಲಿಡಲಾಗಿದೆ. ರಾಜ್ಯದಲ್ಲಿ ಸುಮಾರು 17 ಸಾವಿರ ಪೌರ ಕಾರ್ಮಿಕರ ಹುದ್ದೆಗಳು ಖಾಲಿ ಇವೆ. ಇವುಗಳ ಭರ್ತಿಗಾಗಿ ವಿಶೇಷ ಕಾಯ್ದೆಯ ಮೂಲಕ ನೇಮಕ ಮಾಡುವ ಪ್ರಕ್ರಿಯೆಗೆ ಮುಖ್ಯಯಂತ್ರಿ ಒಪ್ಪಿಗೆ ನೀಡಿದ್ದಾರೆ. ಪೌರ ಕಾರ್ಮಿಕರು ನಿವೃತ್ತಿ ವಯಸ್ಸಿಗೆ ಮುನ್ನವೇ ನಿಧನರಾಗುವ ಪ್ರಕ್ರಿಯೆ ಹೆಚ್ಚುತ್ತಿರುವುದರಿಂದ ಮೂರು ತಿಂಗಳಿಗೊಮ್ಮೆ ಆರೋಗ್ಯ ಶಿಬಿರ ನಡೆಸಲು ಸೂಚಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಜಿಪಂ ಸಿಇಒ ಡಾ.ಎಂ.ಆರ್.ರವಿ, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ರೇಣುಕ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಪೌರ ಕಾರ್ಮಿಕರಿಗೆ ವಿದೇಶಿ ಪ್ರವಾಸ ಭಾಗ್ಯ
ವಿದೇಶದಲ್ಲಿ ಪೌರ ಕಾರ್ಮಿಕರ ಸುರಕ್ಷತೆಗೆ ಯಾವ ಕ್ರಮ ಜರಗಿಸಲಾಗಿದೆ? ಯಾವೆಲ್ಲಾ ಸುರಕ್ಷಾ ಪರಿಕರಗಳನ್ನು ನೀಡಲಾಗುತ್ತಿವೆ ಎಂಬಿತ್ಯಾದಿಯ ಅಧ್ಯಯನಕ್ಕಾಗಿ ರಾಜ್ಯದ ಸುಮಾರು 1 ಸಾವಿರ ಪೌರ ಕಾರ್ಮಿಕರಿಗೆ ವಿದೇಶಿ ಪ್ರವಾಸ ಭಾಗ್ಯ ಕಲ್ಪಿಸಲಾಗಿದೆ. ಈಗಾಗಲೆ ವಿದೇಶಿ ಪ್ರವಾಸದ ಭಾಗ್ಯ ಪಡೆದವರ ಪಾಸ್‌ಪೋರ್ಟ್ ಸಿದ್ಧಪಡಿಸಲಾಗಿದೆ.
ಕೆಎಸ್ಸಾರ್ಟಿಸಿ ವಿರುದ್ಧ ಕ್ರಮ: ಕೆಎಸ್ಸಾರ್ಟಿಸಿಯ ಬಸ್ ನಿಲ್ದಾಣಗಳ ಶೌಚಾಲಯಗಳಲ್ಲಿ ಬಳಕೆದಾರರಿಂದ 5,10,20 ರೂ. ಶುಲ್ಕ ವಸೂಲಿ ಮಾಡಲಾಗುತ್ತದೆ. ಆದರೆ ಶೌಚಾಲಯವನ್ನು ಶುಚಿಗೊಳಿಸುವ ಪೌರ ಕಾರ್ಮಿಕರಿಗೆ ಕೇವಲ 200 ರೂ. ನೀಡಿ ಶೋಷಣೆ ಮಾಡಲಾಗುತ್ತದೆ. ಅವರಿಗೆ ಕನಿಷ್ಠ ಕೂಲಿಯನ್ನೂ ನೀಡಲಾಗುತ್ತದೆ. ಈ ದೌರ್ಜನ್ಯದ ವಿರುದ್ಧ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು.