ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತಕ್ಕೆ ಅನುಮತಿ ನಿರಾಕರಣೆ
.jpg)
ಜೈಪುರ, ಮೇ 27: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ 12 ವಾರದ ಬೆಳವಣಿಗೆ ಹೊಂದಿರುವ ಭ್ರೂಣವನ್ನು ಗರ್ಭದಲ್ಲಿ ಹೊತ್ತ ರಾಜಸ್ತಾನದ 16ರ ಹರೆಯದ ಹುಡುಗಿಯೋರ್ವಳು ಮೇ 10ರಂದು ಗರ್ಭಪಾತಕ್ಕೆ ಅನುಮತಿ ನೀಡುವಂತೆ ಧೋಲ್‌ಪುರದ ಪ್ರಧಾನ ವೈದ್ಯಕೀಯ ಅಧಿಕಾರಿಗೆ ಮನವಿ ಸಲ್ಲಿಸಿದ್ದಳು. ಆದರೆ ವೈದ್ಯರು ಅನುಮತಿ ನಿರಾಕರಿಸಿದ್ದಾರೆ.
ಗರ್ಭದಲ್ಲಿರುವ ಭ್ರೂಣ 12 ವಾರಕ್ಕಿಂತ ಕಡಿಮೆ ಬೆಳವಣಿಗೆ ಹೊಂದಿದ್ದರೆ, ನೋಂದಾಯಿತ ವೈದ್ಯರ ಮೂಲಕ ಗರ್ಭಪಾತ ಮಾಡಿಕೊಳ್ಳಬಹುದು ಎಂದು ಕಾನೂನಿನಲ್ಲಿ ತಿಳಿಸಲಾಗಿದೆ. ಈಗ ಈಕೆಯ ಗರ್ಭದಲ್ಲಿರುವ ಭ್ರೂಣ ಇನ್ನೂ ಎರಡು ವಾರದ ಹೆಚ್ಚುವರಿ ಬೆಳವಣಿಗೆ ಹೊಂದಿದ್ದು ಗರ್ಭಪಾತಕ್ಕೆ ಕಾನೂನಿನ ತೊಡಕು ಎದುರಾಗಿದೆ.
ಸುನೀತಾ(ಹೆಸರು ಬದಲಾಯಿಸಲಾಗಿದೆ) ಎಂಬ ಹೆಸರಿನ ಈ ಹುಡುಗಿ ಬಳಿಕ ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದಾಳೆ. ಆದರೆ ಅಲ್ಲೂ ಅನುಮತಿ ದೊರೆತಿಲ್ಲ.
ನಂತರ ಮೇ 18ರಂದು ರಾಜಸ್ತಾನ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾಳೆ. ತನ್ನ ಆದೇಶ ತಲುಪಿದ ಮೂರು ದಿನದೊಳಗೆ ವೈದ್ಯ ಮಂಡಳಿಯೊಂದನ್ನು ರಚಿಸಿ ಗರ್ಭಪಾತ ನಡೆಸಲು ಕ್ರಮ ಕೈಗೊಳ್ಳುವಂತೆ ಮೇ 25ರಂದು ಹೈಕೋರ್ಟ್ ಆದೇಶಿಸಿತ್ತು.
ಆದರೆ ಇನ್ನೂ ಕೋರ್ಟ್ ಆದೇಶ ಕೈಸೇರಿಲ್ಲ ಎಂದು ಧೋಲ್‌ಪುರ ಪ್ರಧಾನ ವೈದ್ಯಕೀಯ ಅಧಿಕಾರಿ ತಿಳಿಸಿದ್ದಾರೆ. ಈಕೆಯ ಆಗಸ್ಟ್‌ಗೆ 17 ವರ್ಷ ತುಂಬಲಿರುವ ಸುನೀತಾಳ ಮೇಲೆ ಫೆ.1ರಂದು ಸ್ಥಳೀಯ ಹುಡುಗನೋರ್ವ ಅತ್ಯಾಚಾರ ಎಸಗಿದ್ದ. ಈತನ ಸ್ನೇಹಿತ ಈ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು ಬಳಿಕ ಈ ವೀಡಿಯೊವನ್ನು ಬಹಿರಂಗಗೊಳಿಸುವ ಬೆದರಿಕೆ ಒಡ್ಡಿ ಇಬ್ಬರೂ ಆಕೆಯ ಮೇಲೆ ಎರಡು ತಿಂಗಳು ನಿರಂತರ ಅತ್ಯಾಚಾರ ಎಸಗಿದ್ದಾರೆ.
ಹುಡುಗಿ ಗರ್ಭಿಣಿಯಾದಾಗ ವಿಷಯ ತಿಳಿದ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದು ಅದರಂತೆ ದುರ್ಗ್ ಕುಶ್ವಾಹ ಮತ್ತು ಬಬ್ಲೂ ಕುಶ್ವಾಹ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಮಗಳ ಗರ್ಭಪಾತಕ್ಕೆ ಅವಕಾಶ ಕೋರಿ ಸುನೀತಾಳ ತಂದೆ ಮೇ 1ರಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಆದರೆ ತನಗೆ ಈ ಅರ್ಜಿ ತಲುಪಿಯೇ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದು, ನ್ಯಾಯಾಲಯಕ್ಕೆ ಮನವಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಅದರಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದು ಮೇ 12ರಂದು ಈ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಕೃಷಿ ಆದಾಯವನ್ನೇ ಜೀವನಾಧಾರವಾಗಿ ಹೊಂದಿರುವ ಸುನೀತಾಳ ಕುಟುಂಬ ಈ ಘಟನೆಯಿಂದ ಹೈರಾಣಾಗಿ ಹೋಗಿದೆ.







