ಮಣಿಪಾಲ: ತಂದೆ-ಮಗಳಿಗೆ ಆರ್ಯಭಟ ಪ್ರಶಸ್ತಿ

ಮಣಿಪಾಲ, ಮೇ 27: ತಂದೆ-ಮಗಳ ಜೋಡಿಯಾದ ಮಣಿಪಾಲ ವಿವಿಯ ಎಸ್ಟೇಟ್ ಆಫೀಸರ್ ಜೈವಿಠಲ್ ಹಾಗೂ ಅರ್ಚನಾ ಅವರಿಗೆ ಕ್ರಮವಾಗಿ ಸಮಾಜ ಸೇವೆ ಹಾಗೂ ಕ್ರೀಡಾರಂಗದಲ್ಲಿ ಮಾಡಿದ ಸೇವೆಗಾಗಿ ಬುಧವಾರ ಬೆಂಗಳೂರಿನಲ್ಲಿ ‘ಆರ್ಯಭಟ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಘಟನೆ ರಾಜ್ಯದ ಗಣ್ಯರಿಗೆ ಪ್ರತಿವರ್ಷ ಈ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಬುಧವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ 42ನೇ ವರ್ಷದ ಆರ್ಯಭಟ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಂದೆ-ಮಗಳಿಗೆ ಈ ಪ್ರಶಸ್ತಿ ನೀಡಲಾಯಿತು.
ಜೈವಿಠಲ್ ಅವರು ಉಡುಪಿ ಹಾಗೂ ಮಣಿಪಾಲಗಳಲ್ಲಿ ಸಮಾಜಸೇವೆಯ ಮೂಲಕ ಗುರುತಿಸಿಕೊಂಡಿದ್ದರೆ, ಅರ್ಚನಾ ವಿಶೇಷ ಮಕ್ಕಳ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಿ ಈಜು ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು, ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾಳೆ.
ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ವಿ.ಗೋಪಾಲ ಗೌಡ, ದೂರದರ್ಶನದ ಹೆಚ್ಚುವರಿ ಪ್ರಧಾನ ನಿರ್ದೇಶಕ ಡಾ.ಮಹೇಶ ಜೋಶಿ, ಚಲನಚಿತ್ರ ನಿರ್ದೇಶಕ ಸಾಯಿಪ್ರಕಾಶ್ ಹಾಗೂ ಆರ್ಯಭಟದ ಸ್ಥಾಪಕ ಅಧ್ಯಕ್ಷ ಡಾ.ಎಚ್.ಎಲ್.ಎನ್,ರಾವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







