ಉಷಾ ಆತ್ಮಹತ್ಯೆಗೆ ಅತ್ತೆ ಮಾವ ಪ್ರಚೋದನೆ ಕಾರಣ: ತಹಶೀಲ್ದಾರ್ ತನಿಖೆಯಿಂದ ಸಾಬೀತು
ಹಿರಿಯಡ್ಕ, ಮೇ 27: ಬೆಳ್ಳಂಪಳ್ಳಿ ಗ್ರಾಮದ ಪುಣಚೂರು ಕಂಬಳ ಮಜಲು ನಿವಾಸಿ ಸತೀಶ್ ನಾಯ್ಕ್ ಎಂಬವರ ಪತ್ನಿ ಉಷಾ (25) ಆತ್ಮಹತ್ಯೆಗೆ ಆಕೆಯ ಅತ್ತೆ ಹಾಗೂ ಮಾವರ ಪ್ರಚೋದನೆಯೇ ಕಾರಣ ಎಂಬುದು ತಹಶೀಲ್ದಾರ್ ತನಿಖೆಯಿಂದ ಮೇಲ್ನೋಟಕ್ಕೆ ಕಂಡುಬಂದಿದ್ದು, ಅದರಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಷಾ ಮೇ 20ರಂದು ಪತಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತಳ ಸಹೋದರ ಶೀರೂರು ಗ್ರಾಮದ ಹೊಳೆಬಾಗಿಲು ಗುಡ್ಡೆಯ ಉದಯ ನಾಯ್ಕೆ ಉಷಾಳ ಮರಣದಲ್ಲಿ ಸಂಶಯ ಇರುವುದಾಗಿ ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಉಷಾ ವಿವಾಹವಾಗಿ ಕೇವಲ ಒಂದು ವರ್ಷ ಎರಡು ತಿಂಗಳು ಆಗಿರುವ ಕಾರಣ ಶವ ಪಂಚನಾಮೆಯನ್ನು ಉಡುಪಿ ತಹಶೀಲ್ದಾರ್ ನಡೆಸಿದ್ದರು.
ಮೃತ ಉಷಾರ ತಂದೆ ಅಚ್ಚುತ ಮರಾಠಿ ಮತ್ತು ಮುದ್ದುಮನೆ ನಿವಾಸಿ ಶಿವನಾಯ್ಕ ಹೇಳಿಕೆ ಹಾಗೂ ಪಂಚರ ಅಭಿಪ್ರಾಯದಂತೆ ಮೃತ ಉಷಾರ ಬಳಿ ಅತ್ತೆ ಸರಸ್ವತಿ ಹಾಗೂ ಮಾವ ಚಂದು ನಾಯ್ಕ್ ಸಣ್ಣ ಸಣ್ಣ ವಿಷಯಕ್ಕೆ ಗಲಾಟೆ ಮಾಡುತ್ತಿದ್ದು, ಮದುವೆ ಸಮಯದಲ್ಲಿ ಖರ್ಚಾದ 70,000ರೂ. ಹಣವನ್ನು ಪತಿ ಪತ್ನಿ ಸೇರಿ ನೀಡಿ ಇಲ್ಲದಿದ್ದಲ್ಲಿ ಮನೆ ಬಿಟ್ಟು ಹೋಗುವಂತೆ ಪ್ರಚೋದನೆ ನೀಡುತ್ತಿದ್ದರು. ಇದರಿಂದ ಮನನೊಂದು ಉಷಾ ಆತ್ಮಹತ್ಯೆ ಮಾಡಿಕೊಂಡಿ ರುವುದಾಗಿ ಅಭಿಪ್ರಾಯ ಪಡಲಾಗಿದೆ.
ಅತ್ತೆ ಹಾಗೂ ಮಾವ ಅಪರಾಧ ಎಸಗಿರುವುದು ಮಲ್ನೋಟಕ್ಕೆ ಕಂಡು ಬಂದಿರುವುದರಿಂದ ಆರೋಪಿಗಳ ವಿರುದ್ದ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಇಂದು ಮರು ಪ್ರಕರಣ ದಾಖಲಿಸಲಾಯಿತು.







