ಆರೋಪಿಯಿಂದ ಕುಟುಂಬಕ್ಕೆ ಬೆದರಿಕೆ: ಜಾಮೀನು ರದ್ಧತಿಗೆ ಮನವಿ
ಕೋಡಿಬೆಂಗ್ರೆ ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ

ಉಡುಪಿ, ಮೇ 28: ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕೋಡಿಬೆಂಗ್ರೆ ಎಂಬಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯ ಜಾಮೀನು ರದ್ದುಗೊಳಿಸುವಂತೆ ಆಗ್ರಹಿಸಿ ಸ್ಥಳೀಯರು ಇಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದರು.
ಮೇ 22ರಂದು ಕೋಡಿಬೆಂಗ್ರೆಯ ಯಾದವ್ (30) ಎಂಬಾತ ತನ್ನ ನೆರೆ ಮನೆಯ 11ವರ್ಷ ಹರೆಯದ ಬಾಲಕಿಯನ್ನು ಮನೆಯೊಳಗೆ ಕರೆದು ಲೈಂಗಿಕ ದೌರ್ಜನ್ಯ ಎಸಗಿದ್ದನು. ಈ ಬಗ್ಗೆ ಪೊಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿ ಕೊಂಡ ಉಡುಪಿ ಮಹಿಳಾ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆದರೆ ನ್ಯಾಯಾಲಯವು ಆರೋಪಿಗೆ ಜಾಮೀನು ನೀಡಿ ಬಿಡುಗಡೆ ಗೊಳಿಸಿದೆ.
ಇದೀಗ ಆರೋಪಿ ಊರಿನಲ್ಲಿ ರಾಜಾರೋಷವಾಗಿ ತಿರುಗಾಡುತ್ತ ಸಂತ್ರಸ್ತ ಬಾಲಕಿಯ ಕುಟುಂಬಗಳಿಗೆ ಬೆದರಿಕೆ ಹಾಕುತ್ತಿದ್ದಾನೆ. ಪೊಕ್ಸೊದಂತಹ ಕಠಿಣ ಕಾಯಿದೆಯಡಿ ಬಂಧನಕ್ಕೆ ಒಳಗಾಗಿರುವ ಆರೋಪಿಗೆ ತಕ್ಷಣವೇ ಜಾಮೀನು ದೊರೆತಿರುವುದು ಇಡೀ ಕುಟುಂಬವನ್ನು ಆತಂಕಕ್ಕೀಡು ಮಾಡಿದೆ. ಆರೋಪಿ ಕುಡಿದ ಮತ್ತಿನಲ್ಲಿ ಅಪಾಯ ಎಸಗುವ ಸಾಧ್ಯತೆ ಇರುವುದರಿಂದ ಆತನ ಜಾಮೀನು ರದ್ದು ಪಡಿಸಿ ಕೂಡಲೇ ಜೈಲಿಗೆ ಕಳುಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಂತ್ರಸ್ತ ಬಾಲಕಿಯ ತಂದೆ ಮನವಿಯನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಅವರಿಗೆ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಹೆಚ್ಚುವರಿ ಎಸ್ಪಿ, ಈ ಬಗ್ಗೆ ಲಿಖಿತವಾಗಿ ದೂರು ನೀಡಿದರೆ ಆತನ ಜಾಮೀನು ರದ್ಧು ಮಾಡುವಂತೆ ನ್ಯಾಯಾಲಯಕ್ಕೆ ಬರೆಯಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ನಿತ್ಯಾನಂದ ಕೆಮ್ಮಣ್ಣು, ಚಂದ್ರಿಕಾ ಶೆಟ್ಟಿ, ಸರಳ ಕಾಂಚನ್, ರವಿರಾಜ್, ಉದಯ ಕುಂದರ್ ಪಿತ್ರೋಡಿ, ರವಿ ಕೋಟ್ಯಾನ್, ಜಗನ್ನಾಥ್ ಕುಂದರ್, ಪಾಂಡುರಂಗ ಹಿರಿ ಯಡ್ಕ, ರೋಹಿತಾಕ್ಷ, ಸುರೇಶ್ ಮೆಂಡನ್ ಮೊದಲಾದವರು ಉಪಸ್ಥಿತರಿದ್ದರು.







