ಸಿಇಟಿ-ಕೆಇಎ ಪೂರ್ವ ಸಮಾಲೋಚನೆ ಕಾರ್ಯಕ್ರಮ

ಉಡುಪಿ, ಮೇ 28: ಜಗತ್ತು ತಾಂತ್ರಿಕವಾಗಿ ಪ್ರಗತಿ ಹೊಂದುತ್ತಿರುವ ಇಂದಿನ ಕಾಲಘಟ್ಟದಲ್ಲಿ ಭಾರತವು ಕೂಡ ಈ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕಾಗಿದೆ. ಸ್ವಂತ ಲಾಭದ ಜೊತೆಗೆ ರಾಷ್ಟ್ರ ಪ್ರಗತಿ ಕೂಡ ಮುಖ್ಯ. ಸ್ಪರ್ಧಾತ್ಮಕ ಜಗತ್ತಿನಲ್ಲಿ ತಾಂತ್ರಿಕ ಶಿಕ್ಷಣ ಹಾಗೂ ವೃತ್ತಿಪರ ಶಿಕ್ಷಣಗಳಿಗೆ ಹೆಚ್ಚಿನ ಮಹತ್ವ ಇದೆ ಎಂದು ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಶ್ರೀಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಮತ್ತು ಬಂಟಕಲ್ ಶ್ರೀಮಧ್ವ ವಾದಿರಾಜತಾಂತ್ರಿಕ ಮಹಾವಿದ್ಯಾಲಯದ ಜಂಟಿ ಆಶ್ರಯದಲ್ಲಿ ಮತ್ತು ಪರ್ಯಾಯ ಪೇಜಾವರ ಮಠ, ಶ್ರೀಕೃಷ್ಣ ಮಠದ ಸಹಯೋಗದೊಂದಿಗೆ ರವಿವಾರ ಕೃಷ್ಣ ಮಠದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾದ ಸಿಇಟಿ-ಕೆಇಎ ಪ್ರವೇಶ ಪ್ರಕ್ರಿಯೆಗಳ ಪೂರ್ವ ಸಮಾಲೋಚನೆ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಮಠಗಳು ಮಂತ್ರಜ್ಞಾನವನ್ನು ಪ್ರಸರಿಸುವುದರ ಜೊತೆಗೆ ತಂತ್ರಜ್ಞಾನದ ಪ್ರಗತಿಗೂ ಮಾರ್ಗದರ್ಶನ ನೀಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸೋದೆ ಮಠವು ವಿದ್ಯಾ ಸಂಸ್ಥೆಯನ್ನು ಸ್ಥಾಪಿಸಿ ಕಾರ್ಯಸಾಧನೆಯನ್ನು ಮಾಡಿದೆ. ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಮಾರ್ಗದರ್ಶನಗಳನ್ನು ಪಡೆದು ತಮ್ಮ ಹಾಗೂ ರಾಷ್ಟ್ರದ ಭವಿಷ್ಯವನ್ನು ರೂಪಿಸಬೇಕು ಎಂದು ಸ್ವಾಮೀಜಿ ತಿಳಿಸಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮಾಜಿ ನೋಡಲ್ ಅಧಿಕಾರಿ ಮತ್ತು ಶಿರಸಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಾಲ ಚಂದ್ರ ಭಟ್ ಸಿಇಟಿ ಸಮಾಲೋಚನಾ ಪ್ರಕ್ರಿಯೆ ಮತ್ತು ಹೊಸ ನಿಯಮಾವಳಿ ಗಳ ಕುರಿತು ಮಾಹಿತಿ ನೀಡಿ, ಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಪ್ರತಿ ಯೊಂದು ಹಂತದಲ್ಲಿ ಅತ್ಯಂತ ಎಚ್ಚರಿಕೆಯನ್ನು ವಹಿಸಬೇಕಾದುದು ಅತ್ಯಂತ ಅಗತ್ಯ. ಪ್ರವೇಶಕ್ಕೆ ಬೇಕಾದ ದಾಖಲೆಗಳಿಂದ ಹಿಡಿದು, ಪ್ರಥಮ ಸುತ್ತಿನ ಕೋರ್ಸ್ ಆಯ್ಕೆ, ಕಾಲೇಜು ಆಯ್ಕೆ ಪ್ರಕ್ರಿಯೆಗಳಲ್ಲಿ ಸೂಕ್ತ ನಿರ್ಧಾರದಲ್ಲಿ ಅತ್ಯಂತ ಸಂಯಮದ ಅವಶ್ಯಕತೆಯಿದೆ. ಪ್ರಥಮ ಸುತ್ತಿನಲ್ಲಿ ನೀಡಿದ ಆಯ್ಕೆ ಗಳನ್ನು ಮುಂದಿನ ಸುತ್ತುಗಳಲ್ಲಿ ಉತ್ತಮ ಪಡಿಸುವ ಆಯ್ಕೆಯಷ್ಟೆ ಇದೆ ಎಂಬ ಅಂಶವನ್ನು ಗಮನಿಸಬೇಕು ಎಂದರು.
ಪಿಯುಸಿಯ ನಂತರ ಅಧ್ಯಯನಕ್ಕೆ ಆರಿಸಿಕೊಳ್ಳಬಹುದಾದ ವಿವಿಧ ಕೋರ್ಸ್ ಗಳು, ಅರ್ಹತೆಗಳು ಮತ್ತು ಅವಕಾಶಗಳ ಕುರಿತ ಮಾಹಿತಿಯನ್ನು ಸಂಸ್ಥೆಯ ಗಣಕಯಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ವೇಣುಗೋಪಾಲ ರಾವ್, ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅದ್ಯಯನ ಮತ್ತು ವಿವಿಧ ಸವಲತುತಿಗಳ ಬಗ್ಗೆ ಮಾಹಿತಿಯನ್ನು ಪ್ರಾಂಶುಪಾಲ ಡಾ. ತಿರುಮಲೇಶ್ವರ ಭಟ್ ನೀಡಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ, ಸೋದೆ ಮಠಾಧೀಶ ಶ್ರೀವಿಶ್ವವಲ್ಲಭತೀರ್ಥ ಸ್ವಾಮೀಜಿ ವಹಿಸಿದ್ದರು. ಕಾರ್ಯದರ್ಶಿ ರತ್ನಕುಮಾರ್ ಉಪಸ್ಥಿತರಿದ್ದರು. ವಿದ್ಯು ನ್ಮಾನ ಸಂವಹನ ವಿಭಾಗದ ಮುಖ್ಯಸ್ಥ ಡಾ.ಬಾಲಚಂದ್ರ ಆಚಾರ್ ಸ್ವಾಗತಿಸಿ ದರು. ಗಣಕ ಯಂತ್ರ ವಿಭಾಗದ ಮುಖ್ಯಸ್ಥ ಡಾ.ವಾಸುದೇವ ವಂದಿಸಿದರು. ಉಪನ್ಯಾಸಕರಾದ ಸೌಮ್ಯಾ ಭಟ್ ಮತ್ತು ರಮ್ಯಶ್ರೀ ಕಾರ್ಯಕ್ರಮ ನಿರೂಪಿಸಿ ದರು.







