ಸರ್ಫಿಂಗ್ ಕ್ರೀಡೆಗೆ ಪ್ರೋತ್ಸಾಹ ಸಿಗುವಂತಾಗಲಿ: ಕ್ರಿಕೆಟಿಗ ಜಾಂಟಿ ರೋಡ್ಸ್
ಇಂಡಿಯನ್ ಓಪನ್ ಸರ್ಫಿಂಗ್ ಸಮಾರೋಪ
ಮಂಗಳೂರು, ಮೇ 28: ಕ್ರಿಕೆಟ್ ಬಿಟ್ಟರೆ ಸರ್ಫಿಂಗ್ ನನ್ನ ಆಸಕ್ತಿಯುತ ಕ್ರೀಡೆ. ದೈಹಿತ ಮತ್ತು ಮಾನಸಿಕ ನೆಮ್ಮದಿಗೆ ಈ ಕ್ರೀಡೆ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಇಂತಹ ಕ್ರೀಡೆ ಬೆಳೆಸುವಲ್ಲಿ ವಿಶೇಷ ಮುತುವರ್ಜಿ ಮತ್ತು ಪೋತ್ಸಾಹ ಅಗತ್ಯವಾಗಿದೆ ಎಂದು ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ರವಿವಾರ ನಗರದ ಹೊರಭಾಗದಲ್ಲಿರುವ ಸಸಿಹಿತ್ಲು ಬೀಚ್‌ನಲ್ಲಿ ಮೂರು ದಿನಗಳ ಕಾಲ ನಡೆದ ಇಂಡಿಯನ್ ಓಪನ್ ಆಫ್ ಸರ್ಫಿಂಗ್‌ನ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು.
ಕ್ರಿಕೆಟ್ ವಿಚಾರವನ್ನು ಬಿಟ್ಟು ಸರ್ಫಿಂಗ್ ಕಡೆಗೆ ಆಕರ್ಷಿತನಾಗಿದ್ದೇನೆ. ಭಾರತದಲ್ಲಿ ಸರ್ಫಿಂಗ್ ಕ್ರೀಡೆ ಬಹಳಷ್ಟು ಮಂದಿಯನ್ನು ಆಕರ್ಷಣೆ ಮಾಡುತ್ತಿದೆ. ಕರಾವಳಿ ಭಾಗದಲ್ಲೂ ಈ ಕುರಿತು ವಿಶೇಷ ಒಲವು ವ್ಯಕ್ತವಾಗುತ್ತಿರುವುದು ಸಂತೋಷದ ವಿಚಾರ ಎಂದವರು ಹೇಳಿದರು.
ಮೂರು ವರ್ಷದ ಹಿಂದೆ ಸಸಿಹಿತ್ಲುವಿಗೆ ಬಂದಾಗ ಬೀಚ್ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯನ್ನು ಕಂಡಿರಲಿಲ್ಲ. ಕಳೆದ ವರ್ಷದ ಸರ್ಫಿಂಗ್‌ನ ಮೂಲಕವಾಗಿ ಪ್ರಸ್ತುತ ಸಸಿಹಿತ್ಲು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಿದೆ. ಇದರ ಹಿಂದೆ ಸಾಕಷ್ಟು ಮಂದಿ ದುಡಿದಿದ್ದಾರೆ. ಪ್ರಸ್ತುತ, ಭಾರತ ಸರ್ಫಿಂಗ್‌ನಲ್ಲಿ ವಿಶೇಷ ಆಸಕ್ತಿಯನ್ನ ಹೊಂದಿದ್ದು, ಈ ಬಾರಿ ನಡೆದ ಇಂಡಿಯನ್ ಓಪನ್ ಸರ್ಫಿಂಗ್ ಅತ್ಯಂತ ಯಶಸ್ವಿಯಾಗಿದೆ ಎಂದು ಜಾಂಟಿ ರೋಡ್ಸ್ ಹೇಳಿದರು.
ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಾತನಾಡಿ, ಕರಾವಳಿಯಲ್ಲಿ ಸರ್ಫಿಂಗ್ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ದೊರಕುತ್ತಿರುವುದು ಸಂತೋಷದ ವಿಚಾರ. ಇದರಿಂದಾಗಿ ಪ್ರತಿಭೆಗಳಿಗೆ ಇನ್ನಷ್ಟು ಪ್ರೇರಣೆ ದೊರಕಲಿದೆ. ಈ ಕ್ರೀಡೆಯಲ್ಲಿ ಗುರುತಿಸಿಕೊಂಡ ಹಲವು ಸರ್ಫಿಂಗ್ ಸಾಧಕರು ದೇಶ ಮತ್ತು ವಿದೇಶಗಳಲ್ಲಿ ಹೆಸರು ಮಾಡಿರುವುದು ಹೆಮ್ಮೆಯ ವಿಚಾರ ಎಂದರು.
ಈ ಸಂದರ್ಭದಲ್ಲಿ ವಿವಿಧ ವಿಭಾಗದಲ್ಲಿ ವಿಜೇತರಾದವರಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು. ದ.ಕ. ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್, ಅಪರ ಜಿಲ್ಲಾಧಿಕಾರಿ ಕುಮಾರ್, ದ.ಕ. ಜಿ.ಪಂ. ಸಿಇಒ ಡಾ.ಎಂ.ಆರ್. ರವಿ, ಶಾಸಕ ಕೆ. ಅಭಯಚಂದ್ರ ಜೈನ್, ಮುಖ್ಯ ಸಚೇತಕ ಐವನ್ ಡಿಸೋಜ, ಮೇಯರ್ ಕವಿತಾ ಸನಿಲ್, ಮಿಸ್ ಇಂಡಿಯಾ ಸೌತ್ ನಿಕ್ಷಿತಾ ಶೆಣೈ, ವಸಂತ ಬರ್ನಾಡ್, ಸರ್ಫಿಂಗ್ ಸ್ವಾಮಿ, ಜಲಜ, ಕಿಶೋರ್ ಕುಮಾರ್, ಮಿಥುನ್ ರೈ, ಮನೋಹರ ಶೆಟ್ಟಿ, ಯತೀಶ್ ಬೈಕಂಪಾಡಿ, ಗೌರವ ಹೆಗ್ಡೆ, ಜೀವನ್ ಸಲ್ದಾನ ಮೊದಲಾದವರು ಉಪಸ್ಥಿತರಿದ್ದರು.
10 ಸಾವಿರ ಪ್ರೇಕ್ಷಕರು: ಸಸಿಹಿತ್ಲು ಬೀಚ್‌ನಲ್ಲಿ ಮೂರು ದಿನಗಳ ಕಾಲ ನಡೆದ ಇಂಡಿಯನ್ ಓಪನ್ ಆಫ್ ಸರ್ಫಿಂಗ್‌ನ ಸಮಾರೋಪದಲ್ಲಿ ರವಿವಾರ ಬೆಳಗ್ಗೆಯಿಂದ ಸಂಜೆಯ ತನಕ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಪ್ರೇಕ್ಷಕರು ಸರ್ಫಿಂಗ್ ಕ್ರೀಡೆಯ ಸವಿಯನ್ನು ಸವಿದರು.
ದೇಶ ಮತ್ತು ವಿದೇಶಗಳಿಂದಲೂ ಆಗಮಿಸಿದ ಸರ್ಫಿಂಗ್ ಕ್ರೀಡಾಭಿಮಾನಿಗಳು ಕ್ರೀಡೆಯ ಸವಿಯನ್ನು ಸವಿದರು.