ಜಾರ್ಖಂಡ್ ನ ಈ ಗ್ರಾಮ ಸೈಬರ್ ಕಳ್ಳರ ಊರು!

ಅಹ್ಮದಾಬಾದ್, ಮೇ 29: ಜಾರ್ಖಂಡ್‌ನ ಗಿರಿಧ್ ಗ್ರಾಮ ಇದೀಗ ಸೈಬರ್ ಝೋನ್ ಎಂದು (ಕು)ಖ್ಯಾತವಾಗಿದೆ. ಡಿಜಿಟಲ್ ಕ್ರಾಂತಿಯಿಂದಲ್ಲ; ಬದಲಾಗಿ ಸೈಬರ್ ಅಪರಾಧಗಳಿಂದ. ಬಿನ್ಸ್‌ಮಿ ಗ್ರಾಮಕ್ಕೆ ಸೇರುವ ಈ ಹಳ್ಳಿಯಲ್ಲಿ ಸಾವಿರ ಕುಟುಂಬಗಳು ವಾಸವಿದ್ದರೆ, ಇಲ್ಲಿ 900 ಮಂದಿ ಸೈಬರ್ ಅಪರಾಧಿಗಳಿದ್ದಾರೆ.
ಕೆಲವು ಸೆಲ್‌ಫೋನ್‌ಗಳೊಂದಿಗೆ 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಜನರನ್ನು ವಂಚಿಸಿದ ಮುಹಮ್ಮದ್ ಜೀಲಾನಿ ಅನ್ಸಾರಿ ಎಂಬಾತನ ಬೇಟೆಗೆ ಅಹ್ಮದಾಬಾದ್‌ನ ಸೈಬರ್ ಘಟಕದ ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಂಡಾಗ ಈ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಈ ತಂಡಕ್ಕೆ ನೆರವು ನೀಡಿದ ಸ್ಥಳೀಯ ಪೊಲೀಸರು, ಸೈಬರ್ ವಲಯ ಪ್ರವೇಶಿಸುತ್ತಿದ್ದೇವೆ ಎಂದು ಹೇಳಿದ್ದರು.
"ಈ ಕಾರ್ಯಾಚರಣೆಯನ್ನು ಅತ್ಯಂತ ಗುಪ್ತವಾಗಿ ಇಟ್ಟಿದ್ದೆವು. ಆದರೆ ಬಿನ್ಸ್‌ಮಿ ಗ್ರಾಮ ಪ್ರವೇಶಿಸುತ್ತಿದ್ದಂತೆ, ಜಾರ್ಖಂಡ್ ಪೊಲೀಸ್ ಪೇದೆಯೊಬ್ಬ, ಆನ್‌ಲೈನ್ ಅಪರಾಧಿಯನ್ನು ಹುಡುಕಲು ಬಂದಿದ್ದೀರಾ ಎಂದು ಕೇಳಿದ. ಹೌದು ಎಂದು ಹೇಳಿದ್ದಕ್ಕೆ, ಈ ಸೈಬರ್ ವಲಯದಲ್ಲಿ ಯಾರನ್ನು ಹುಡುಕುತ್ತೀರಿ ಎಂದು ಉದ್ಗಾರ ತೆಗೆದ" ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದಿನಕ್ಕೆ 200 ಕರೆಗಳನ್ನು ಮಾಡುತ್ತಿದ್ದ ಅನ್ಸಾರಿ ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಜನರನ್ನು ವಂಚಿಸಿದ್ದ. ಪ್ರತಿ 10-15 ಕರೆಗೆ ಒಬ್ಬರಂತೆ ಜನ ತಮ್ಮ ಎಟಿಎಂ ಕಾರ್ಡ್ ಸಂಖ್ಯೆ, ಸಿವಿವಿ ಸಂಖ್ಯೆ ಹೇಳುತ್ತಿದ್ದರು. ಈ ಮೂಲಕ ಅವರ ಬ್ಯಾಂಕ್‌ಖಾತೆಯಲ್ಲಿ ವಹಿವಾಟು ನಡೆಸುತ್ತಿದ್ದ. 10 ವಿಭಿನ್ನ ಇ-ಮೇಲ್ ಐಡಿ ಮೂಲಕ 34 ಇ-ವ್ಯಾಲೆಟ್‌ಗಳಲ್ಲಿ ಖಾತೆ ಹೊಂದಿದ್ದ. ಆದರೆ ಸ್ಥಳೀಯವಾಗಿ ಯಾವ ಪ್ರಕರಣವೂ ಈತನ ವಿರುದ್ಧ ದಾಖಲಾಗಿರಲಿಲ್ಲ. ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಈ ಆತಂಕಕಾರಿ ಅಂಶವನ್ನು ಬಾಯಿಬಿಟ್ಟಿದ್ದಾನೆ.







