ಅತ್ಯಾಚಾರ ದೂರು ನೀಡಿದ ಮಹಿಳೆಗೆ ಗಲ್ಲು ಶಿಕ್ಷೆ!

ಲಾಹೋರ್, ಮೇ 29: ಅತ್ಯಾಚಾರಿಗಲ್ಲ; ಅತ್ಯಾಚಾರದ ಬಗ್ಗೆ ದೂರು ನೀಡಿದ ಮಹಿಳೆಗೆ ಗಲ್ಲು ಶಿಕ್ಷೆ! ಅಚ್ಚರಿಯಾಗುತ್ತಿದೆಯೇ? ವಿಚಿತ್ರವಾದರೂ ಸತ್ಯ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗ್ರಾಮವೊಂದರಲ್ಲಿ ಬಂದೂಕು ತೋರಿಸಿ, ಅತ್ಯಾಚಾರ ಮಾಡಲಾಗಿದೆ ಎಂದು ಆರೋಪ ಮಾಡಿದ್ದ ಮಹಿಳೆಗೆ ಗ್ರಾಮದ ಹಿರಿಯರು "ಪಂಚಾಯ್ತಿ" ನಡೆಸಿ ಮರಣದಂಡನೆ ವಿಧಿಸಿದ್ದಾರೆ.
ಅತ್ಯಾಚಾರ ದೂರು ನೀಡಿದ 19 ವರ್ಷದ ಮಹಿಳೆ ತನ್ನ ಸಂಬಂಧಿಯ ಜತೆ ಅಕ್ರಮ ಸಂಪರ್ಕ ಹೊಂದಿದ್ದಳು ಎಂದು ಆಪಾದಿಸಿದ ಹಿರಿಯರು ಈ ತೀರ್ಮಾನಕ್ಕೆ ಬಂದಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೇ ಗ್ರಾಮದಿಂದ ತಪ್ಪಿಸಿಕೊಂಡು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಲಾಹೋರ್‌ನಿಂದ 400 ಕಿಲೋಮೀಟರ್ ದೂರದ ರಜನ್‌ಪುರ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶುಮೈಲಾ ಎಂಬ ಮಹಿಳೆ ತನ್ನ ಸಂಬಂಧಿ ಖಲೀಲ್ ಅಹ್ಮದ್ ಎಂಬಾತನ ವಿರುದ್ಧ ಅತ್ಯಾಚಾರ ದೂರು ನೀಡಿದ್ದರು. ಬಂದೂಕು ತೋರಿಸಿ ಅತ್ಯಾಚಾರ ಎಸಗಿದ್ದಾಗಿ ವಿಚಾರಣೆ ವೇಳೆ ಹೇಳಿದ್ದರು. ಬಂದೂಕನ್ನು ತನ್ನತ್ತ ಗುರಿ ಮಾಡಿ, ಅತ್ಯಾಚಾರ ಎಸಗಿದ್ದರಿಂದ ಅಪಾಯವನ್ನು ಸೂಚಿಸಲೂ ಸಾಧ್ಯವಾಗಲಿಲ್ಲ ಎಂಬ ಮಹಿಳೆಯ ವಾದವನ್ನು ಗ್ರಾಮದ ಹಿರಿಯರು ಒಪ್ಪದೇ, ಆತನ ಜತೆ ಅಕ್ರಮ ಸಂಬಂಧ ಹೊಂದಿದ್ದಾಗಿ ಆರೋಪ ಹೊರಿಸಿದ್ದರು. ಅಹ್ಮದ್‌ನ ಮೇಲೆ ಯಾವ ಕ್ರಮವನ್ನೂ ಕೈಗೊಳ್ಳದೇ, ಮಹಿಳೆಗೆ ಗಲ್ಲುಶಿಕ್ಷೆಯನ್ನು ಘೋಷಿಸಿದ್ದರು.
ಮಹಿಳೆ ನೀಡಿದ ದೂರಿನ ಮೇರೆಗೆ ಪಂಚಾಯ್ತಿ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯನ್ನು ಸರ್ಕಾರದ ಸುರಕ್ಷಿತ ಗೃಹಕ್ಕೆ ಕಳುಹಿಸಲಾಗಿದೆ.







