9 ವರ್ಷಗಳಿಂದ ಪಾಕಿಸ್ತಾನದಲ್ಲಿ ಸಿಲುಕಿರುವ ಮಗಳನ್ನು ಮರಳಿ ಕರೆತನ್ನಿ: ಸುಷ್ಮಾ ಸ್ವರಾಜ್ ಗೆ ವೃದ್ಧ ದಂಪತಿ ಮನವಿ

ಹೊಸದಿಲ್ಲಿ, ಮೇ 28: ಪಾಕಿಸ್ತಾನದಲ್ಲಿ ಸಿಲುಕಿದ್ದ ಭಾರತೀಯ ಯುವತಿ ಉಝ್ಮಾ ಭಾರತಕ್ಕೆ ಮರಳಿದ ನಂತರ ಇದೀಗ ಹೈದರಾಬಾದ್ ನ ದಂಪತಿಯೊಂದು 9 ವರ್ಷಗಳಿಂದ ಪಾಕಿಸ್ತಾನದಲ್ಲಿ ಸಿಲುಕಿರುವ ತಮ್ಮ ಮಗಳನ್ನು ಭಾರತಕ್ಕೆ ಕರೆ ತರುವಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ರನ್ನು ಆಗ್ರಹಿಸಿದ್ದಾರೆ.
ಪಾಕಿಸ್ತಾನದಲ್ಲಿ ತಮ್ಮ ಮಗಳ ಮೇಲೆ ಆಕೆಯ ಪತಿ ದೌರ್ಜನ್ಯ ಎಸಗುತ್ತಿದ್ದು, ಆಕೆಯನ್ನು ಭಾರತಕ್ಕೆ ಮರಳಿ ಕರೆತಂದರೆ ಅಭಾರಿಯಾಗಿರುವುದಾಗಿ ದಂಪತಿ ತಿಳಿಸಿದ್ದಾರೆ.
“ನಮ್ಮ ಮಗಳು ಪಾಕಿಸ್ತಾನದಲ್ಲಿ ಸಂಕಷ್ಟದಲ್ಲಿದ್ದಾಳೆ. ವರ್ಷಗಳಿಂದ ನಾನು ಆಕೆಯನ್ನು ಕಾಯುತ್ತಿದ್ದೇನೆ. ಸರಕಾರದ ಪ್ರಯತ್ನದಿಂದ ಉಝ್ಮಾ ಭಾರತಕ್ಕೆ ಹಿಂದಿರುಗಿದ ಮೇಲೆ ನನ್ನ ಮಗಳನ್ನೂ ಸರಕಾರ ಭಾರತಕ್ಕೆ ಕರೆಸಬಹುದು ಎಂಬ ಆಶಾಭಾವನೆಯಲ್ಲಿದ್ದೇನೆ. ಈ ಪವಿತ್ರ ರಮಝಾನ್ ತಿಂಗಳಲ್ಲಿ ನನ್ನ ಮಗಳೊಂದಿಗೆ ಹಬ್ಬ ಆಚರಿಸುವ ಆಸೆಯಿದೆ, ಮಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಗುಲಾಮಳಂತೆ ಆಕೆಯನ್ನು ನೋಡಲಾಗುತ್ತಿದೆ. ಸುಷ್ಮಾ ಸ್ವರಾಜ್ ಜಿ ನನ್ನ ಮಗಳನ್ನು ವಾಪಸ್ ಕರೆತನ್ನಿ” ಎಂದು ಪಾಕಿಸ್ತಾನದಲ್ಲಿ ಸಿಲುಕಿರುವ ಮುಹಮ್ಮದಿ ಬೇಗಂರ ತಾಯಿ ವಿನಂತಿಸಿದ್ದಾರೆ,
“9 ವರ್ಷಗಳಿಂದ ಪಾಕಿಸ್ತಾನದಲ್ಲೇ ಉಳಿದಿರುವ ನಮ್ಮ ಮಗಳು ಕರೆ ಮಾಡಿ ಭಾರತಕ್ಕೆ ಮರಳಿ ಕರೆ ತರುವಂತೆ ಹೇಳುತ್ತಾಳೆ. ಸಾಕಷ್ಟು ಪ್ರಯತ್ನದ ನಂತರ ಉಝ್ಮಾಳನ್ನು ಕರೆತಂದ ಸುಷ್ಮಾ ಜೀ ನನ್ನ ಮಗಳನ್ನೂ ವಾಪಸ್ ಕರೆ ತಂದರೆ ಅಭಾರಿಯಾಗಿರುತ್ತೇನೆ” ಎಂದು ಯುವತಿಯ ತಂದೆ ಅಕ್ಬರ್ ಹೇಳಿದ್ದಾರೆ.
ಇಸ್ಲಾಮಾಬಾದ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಈ ಬಗ್ಗೆ ಮಾತನಾಡಿದ್ದು, ಮಗಳ ಪ್ರಕರಣದಲ್ಲಿ ನಿರಂತರ ಪ್ರಯತ್ನದಲ್ಲಿರುವುದಾಗಿ ಅವರು ತಿಳಿಸಿದ್ದಾರೆ ಎಂದು ಅಕ್ಬರ್ ಮಾಹಿತಿ ನೀಡಿದ್ದಾರೆ.
ಯುವತಿ ಒಮಾನ್ ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಪಾಕಿಸ್ತಾನಿ ಪ್ರಜೆ ಮುಹಮ್ಮದ್ ಯೂನುಸ್ ಆಕೆಗೆ ವಂಚನೆಗೈದು ಮದುವೆಯಾಗಿ ಪಾಕಿಸ್ತಾನಕ್ಕೆ ಕರೆದೊಯ್ದಿದ್ದ ಎಂದು ದಂಪತಿ ಮಾಹಿತಿ ನೀಡಿದ್ದಾರೆ.







