ಸಿಬಿಎಸ್ಸಿ 12ನೇ ತರಗತಿ : ಕ್ಯಾನ್ಸರ್ ಅನ್ನು ಸೋಲಿಸಿ 95% ಅಂಕ ಗಳಿಸಿದ ತುಷಾರ್ ರಿಷಿ
ಈ ಟಾಪರ್ ನ ಗುರಿ ಇಂಜಿನಿಯರಿಂಗ್ ಅಲ್ಲ !

ರಾಂಚಿ, ಮೇ. 29: ಇಲ್ಲಿನ 19 ವರ್ಷದ ತುಷಾರ್ ರಿಷಿ ಸಿಬಿಎಸ್ಸಿ 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಶೇ 95 ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಯಾವುದೇ ಹೆಚ್ಚಿನ ಕೋಚಿಂಗ್ ಪಡೆಯದೆ ಉತ್ತೀರ್ಣನಾಗಿದ್ದಾನೆ. ಆತ ಇಂಗ್ಲಿಷ್ ಹಾಗೂ ಭೌತಶಾಸ್ತ್ರದಲ್ಲಿ 95, ಗಣಿತದಲ್ಲಿ 93, ಕಂಪ್ಯೂಟರ್ ನಲ್ಲಿ 89 ಹಾಗೂ ಫೈನ್ ಆರ್ಟ್ಸ್ ನಲ್ಲಿ 100 ಅಂಕಗಳನ್ನು ಪಡೆದಿದ್ದಾನೆ. ಇಷ್ಟೊಂದು ಅಂಕಗಳನ್ನು ತೆಗೆದಿರುವ ಹಲವು ವಿದ್ಯಾರ್ಥಿಗಳಿರುವಾಗ ತುಷಾರ್ ನಲ್ಲೇನಿದೆ ವಿಶೇಷ ಅಂತೀರಾ ? ವಿಶೇಷವೇನಿಲ್ಲ, ತುಷಾರ್ ಕ್ಯಾನ್ಸರ್ ಅನ್ನು ಸೋಲಿಸಿ ದೃಢಚಿತ್ತತೆಯಿಂದ ಪರೀಕ್ಷೆ ಎದುರಿಸಿ ಇಷ್ಟೊಂದು ಉನ್ನತ ಶ್ರೇಣೀಯಲ್ಲಿ ಉತತೀರ್ಣನಾಗಿದ್ದಾನೆ.
ಪ್ರತಿ ಮೂರು ತಿಂಗಳುಗಳಿಗೊಮ್ಮೆ ಆತ ದೆಹಲಿಯ ಏಮ್ಸ್ ಆಸ್ಪತ್ರೆಗೆ ತಪಾಸಣೆಗೆ ತಪ್ಪದೇ ಹೊಗಬೇಕಾಗಿದೆ. ಆದರೆ ತನ್ನ ಎದುರಿರುವ ಸವಾಲುಗಳೆಲ್ಲವನ್ನೂ ಮೆಟ್ಟಿ ನಿಂತು ತುಷಾರ್ ಅತ್ಯುತ್ತ ಸಾಧನೆ ಮಾಡಿದ್ದಾನೆ. ನಿಯಮಿತವಾಗಿ ಓದುವ ಅಭ್ಯಾಸ ರೂಢಿಸಿಕೊಂಡಿದ್ದರಿಂದಲೇ ಆತನಿಗೆ ಈ ಸಾಧನೆ ಮಾಡಲು ಸಹಕಾರಿಯಾಗಿದೆ.
ತುಷಾರ್ ಮೂಳೆಯ ಕ್ಯಾನ್ಸರಿನಿಂದ ಬಳಲುತ್ತಿದ್ದಾನೆ. 2014ರಲ್ಲಿ ಆತನ ಎಡ ಮೊಣಕಾಲಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾದಾಗ ಆತ 10ನೇ ತರಗತಿ ಬೋರ್ಡ್ ಪರೀಕ್ಷೆಗೆ ಹಾಜರಾಗುವುದು ಸಾಧ್ಯವಾಗಿರಲಿಲ್ಲ. ಸುಮಾರು 11 ತಿಂಗಳುಗಳ ಕಾಲ ಕೆಮೋಥೆರಪಿ ಚಿಕಿತ್ಸೆಗೊಳಗಾಗಿದ್ದ ತುಷಾರ್ ನಂತರ ತನ್ನ ಕಲಿಕೆಯತ್ತ ಗಮನ ಕೇಂದ್ರೀಕರಿಸಿದ್ದ.
ಇದೀಗ 12ನೇ ತರಗತಿಯ ನಂತರ ಇತರ ವಿದ್ಯಾರ್ಥಿಗಳಂತೆ ಆತ ಇಂಜಿನಿಯರಿಂಗ್ ಶಿಕ್ಷಣ ಪಡೆಯುವ ಗುರಿ ಹೊಂದಿಲ್ಲ. ಇಂಗ್ಲಿಷ್ ಅಥವಾ ಅರ್ಥಶಾಸ್ತ್ರದಲ್ಲಿ ದಿಲ್ಲಿ ವಿಶ್ವವಿದ್ಯಾಲಯದಿಂದ ಸ್ನಾತ್ತಕೋತ್ತರ ಪದವಿ ಪಡೆಯು ಇಚ್ಛೆ ಆತನದು. ಆತನ ತಾಯಿ ರಿತು ಅಗರ್ವಾಲ್ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮೆಸ್ರ ಇಲ್ಲಿನ ಪ್ರೊಫೆಸರ್ ಆಗಿದ್ದರೆ ತಂದೆ ಶಶಿ ಭೂಷಣ್ ಅಗರ್ವಾಲ್ ಅವರು ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ತನ್ನ ಜೀವನದ ಸಂಘರ್ಷಗಳ ಬಗ್ಗೆ ತುಷಾರ್ ‘ದಿ ಪೇಶಂಟ್ ಪೇಶಂಟ್’ ಎಂಬ ಕೃತಿ ರಚಿಸಿದ್ದಾನೆ.
ಈಗಲೂ ಚಿಕಿತ್ಸೆಯಲ್ಲಿರುವ ತುಷಾರ್ ಆಹಾರದಲ್ಲಿ ಪಥ್ಯ ಪಾಲಿಸಬೇಕಿದ್ದು ತನ್ನ ಆರೋಗ್ಯದ ಬಗ್ಗೆ ತೀರಾ ಕಟ್ಟೆಚ್ಚರ ವಹಿಸಬೇಕಾಗಿದೆ.







