ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗೆ 21.84 ಕೋಟಿ ರೂ. ಲಾಭ- ಡಾ.ಎಂ.ಎನ್.ರಾಜೇಂದ್ರ ಕುಮಾರ್

ಮಂಗಳೂರು, ಮೇ 29: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 2017ರ ಮಾರ್ಚ್ ಅಂತ್ಯದಲ್ಲಿ 21.84 ಕೋಟಿ ರೂ. ಲಾಭಗಳಿಸಿದೆ. ನೋಟು ಅಮಾನ್ಯದ ಬಳಿಕ ಎದುರಾದ ಸಂಕಷ್ಟದ ನಡುವೆಯೂ ಬ್ಯಾಂಕ್ ದಾಖಲೆಯ ಲಾಭಗಳಿಸಲು ಸಾಧ್ಯವಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಜಿಲ್ಲೆಯ ಸಹಕಾರಿ ರಂಗದಲ್ಲಿ 103 ವರ್ಷಗಳ ಇತಿಹಾಸವನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕಳೆದ ಆರ್ಥಿಕ ವರ್ಷದಲ್ಲಿ 5883.66 ಕೋಟಿ ರೂ. ಆರ್ಥಿಕ ವ್ಯವಹಾರ ನಡೆಸಿದೆ. 2017ರಲ್ಲಿ 6900 ಕೋಟಿ ರೂ. ಆರ್ಥಿಕ ವ್ಯವಹಾರ ನಡೆಸುವ ಗುರಿ ಹೊಂದಿದೆ. 2,382 ಕೋಟಿ ಮುಂಗಡ ನೀಡಿದೆ. ಸತತ 22 ವರ್ಷಗಳಿಂದ ಕೃಷಿ ಸಾಲ ವಸೂಲಾತಿ ಯಲ್ಲಿ ಬ್ಯಾಂಕ್ ಶೇ 100 ಸಾಧನೆ ಮಾಡಿರುವುದು ರಾಷ್ಟ್ರೀಯ ದಾಖಲೆಯಾಗಿದೆ. ಅದೇ ರೀತಿ ಅವಿಭಜಿತ ಜಿಲ್ಲೆಯಲ್ಲಿ 34 ಕೃಷಿ ಪತ್ತಿನ ಸಹಕಾರಿ ಸಂಘಗಳು ಕೃಷಿ ಸಾಲ ವಸೂಲಾತಿಯಲ್ಲಿ ಶೇ 100 ಸಾಧನೆ ಮಾಡಿವೆ. ಬ್ಯಾಂಕ್ 101 ಶಾಖೆಗಳ ಮೂಲಕ ಸರಕಾರದ ಠೇವಣಿ ಇಲ್ಲದೆ ಗ್ರಾಹಕರ ಮೂಲಕ ರೂ 3201.64 ಕೋಟಿ ಠೇವಣಿ ಸಂಗ್ರಹಿಸಿ ರಾಜ್ಯದ ಕೇಂದ್ರ ಸಹಕಾರಿ ಬ್ಯಾಂಕ್‌ಗಳಲ್ಲಿ ಅಗ್ರಸ್ಥಾನದಲ್ಲಿದೆ.
ಬ್ಯಾಂಕ್‌ಗೆ 918 ಸಂಘಗಳು ಸದಸ್ಯರಾಗಿವೆ. ಇವುಗಳ ದುಡಿಯುವ ಬಂಡವಾಳ 4338.95 ಕೋಟಿ ಆಗಿದ್ದು ಕಳೆದ ವರ್ಷಕ್ಕಿಂತ ಶೇ 7.48ರಷ್ಟು ಏರಿಕೆಯಾಗಿದೆ. ಜಿಲ್ಲೆಯಲ್ಲಿ 72,837 ರುಪೇ ಕಿಸಾನ್ ಕಾರ್ಡ್‌ಗಳನ್ನು ರೈತರಿಗೆ ವಿತರಿಸಲಾಗಿದೆ. 37,616 ರುಪೇ ಡೆಬಿಟ್ ಕಾರ್ಡ್‌ಗಳನ್ನು ಬ್ಯಾಂಕ್ ಮೂಲಕ ಇತರ ಗ್ರಾಹಕರಿಗೂ ನೀಡಲಾಗಿದೆ ಎಂದು ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
100 ಎಟಿಎಂ, ಮೊಬೈಲ್ ಬ್ಯಾಂಕಿಂಗ್, ಇಂಟರ್‌ನೆಟ್ ಬ್ಯಾಂಕಿಂಗ್ ಗುರಿ:- ಉಭಯ ಜಿಲ್ಲೆಗಳಲ್ಲಿ ಹೊಸದಾಗಿ 100 ಎಟಿಎಂಗಳನ್ನು ದಕ, ಉಡುಪಿ ಜಿಲ್ಲೆಗಳಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಹಭಾಗಿತ್ವದಲ್ಲಿ ತೆರೆಯಲು ಕಾರ್ಯಯೋಜನೆ ರೂಪಿಸಲಾಗಿದೆ. ಈ ಎಟಿಎಂನಲ್ಲಿ ಯಾವೂದೇ ಬ್ಯಾಂಕಿನ ಎಟಿಎಂ ಕಾರ್ಡ್ ಬಳಸಿ ಹಣ ಪಡೆಯಬಹುದಾಗಿದೆ. ಮನೆಯಿಂದಲೇ ಬ್ಯಾಂಕಿಂಗ್ ವ್ಯವಹಾರವನ್ನು ಟ್ಯಾಬ್ ಮೂಲಕ ನಡೆಸಲು ಟ್ಯಾಬ್ ಬ್ಯಾಂಕಿಂಗ್ ಪರಿಚಯಿಸುವ ಗುರಿ ಹೊಂದಲಾಗಿದೆ.
ಮೊಬೈಲ್ ಬ್ಯಾಂಕಿಂಗ್, ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಕಾಮನ್ ಸಾಪ್ಟ್‌ವೇರ್, ಉಭಯ ಜಿಲ್ಲೆಗಳಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ,ಸೋಲಾರ್ ಸ್ಥಾಪನೆಗೆ ಸಹಕಾರ, ಇಂಟರ್‌ನೆಟ್ ಬ್ಯಾಂಕಿಂಗ್ , ಮೊಬೈಲ್ ಪೇಮೆಂಟ್ ಸಿಸ್ಟಮ್ ಯೋಜನೆ ಬ್ಯಾಂಕಿನ ಮುಂದಿನ ಯೋಜನೆಯಾಗಿದೆ.
ಬ್ಯಾಂಕ್ 18 ಬಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ,16 ಬಾರಿ ನಬಾರ್ಡ್ ಪ್ರಶಸ್ತಿ , ಎರಡು ವರ್ಷ ಎಫ್‌ಸಿಬಿಎ ಪ್ರಶಸ್ತಿ, 43,156 ಸ್ವ ಸಹಾಯ ಗುಂಪುಗಳನ್ನು ಸ್ಥಾಪಿಸಿ ಬ್ಯಾಂಕ್ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ಜಿಲ್ಲೆಯಲ್ಲಿ 104467 ರೈತರಿಗೆ ಮಂಗಳಾ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ವಿತರಿಸಲಾಗಿದೆ.
76705 ಕಿಸಾನ್ ಕ್ರೆಡಿಟ್ ಕಾರ್ಡ್‌ದಾರರಿಗೆ ವೈಯಕ್ತಿಕ ಅಪಘಾತ ವಿಮಾ ಸೌಲಭ್ಯವನ್ನು ಒದಗಿಸಲಾಗಿದೆ. ಗ್ರಾಹಕರ ಮನೆ ಬಾಗಿಲಿಗೆ ಮೊಬೈಲ್ ಬ್ಯಾಂಕಿಂಗ್‌ನ್ನು ಮೊದಲು ಪರಿಚಯಿಸಿದ ಕೀರ್ತಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗೆ ಸಲ್ಲುತ್ತದೆ. ಬ್ಯಾಂಕಿನ ಮೂಲಕ 22981 ರುಪೇ ಕಿಸಾನ್ ಚಿಪ್ ಕಾರ್ಡ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. ಬ್ಯಾಂಕ್ ಸಿಬ್ಬಂದಿಗಳಿಗೆ ಪಿಂಚಣಿ ಯೋಜನೆ ಕಾರ್ಯರೂಪಕ್ಕೆ ತರಲಾಗಿದೆ.
ಕೇಂದ್ರ ಬ್ಯಾಂಕ್ ಕೊಡಿಯಾಲ ಬೈಲ್ ಶಾಖೆಯಲ್ಲಿ ಕಿಯೋಕ್ಸ್ ಯಂತ್ರ ಅಳವಡಿಸಿ ಹಣ ಪಡೆಯಲು ಹಾಗೂ ಚೆಕ್ ನಗದೀಕರಣಕ್ಕಾಗಿ ವ್ಯವಸ್ಥೆ ಕಲ್ಪಿಸಲಾಗಿದೆ. ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಸುಸುಜ್ಜಿತವಾದ ತರಬೇತಿ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ ವಿನಯ ಕುಮಾರ್ ಸೂರಿಂಜೆ, ಟಿ.ಜಿ.ರಾಜಾರಾಮ ಭಟ್, ಭಾಸ್ಕರ ಎಸ್. ಕೊಟ್ಯಾನ್, ಬಿ.ರಘುರಾಮ ಶೆಟ್ಟಿ, ಎಂ.ವಾದಿರಾಜ ಶೆಟ್ಟಿ, ಕೆ.ಎಸ್.ದೇವರಾಜ್, ಸದಾಶಿವ ಉಳ್ಳಾಲ್, ಎಸ್.ರಾಜು ಪೂಜಾರಿ, ಶಶಿಕುಮಾರ್ ರೈ, ಎಸ್.ಬಿ.ಜಯರಾಮ ರೈ, ಡಾ.ಐಕಳ ದೇವಿ ಪ್ರಸಾದ್ ಶೆಟ್ಟಿ ಬೆಳಪು, ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸತೀಶ್ ಎಸ್, ಅಪೆಕ್ಸ್ ಬ್ಯಾಂಕ್ ಎಜಿಎಂ ವಾಸುಗೊಲ್ಲ, ನಬಾರ್ಡ್ ಎಜಿಎಂ/ಡಿಡಿಎಂ ರಮೇಶ್ ಎಂ, ಉಡುಪಿ ಸಹಕಾರಿ ಸಂಘಗಳ ಉಪ ನಿಬಂಧಕ ಪ್ರವಿಣ್ ನಾಯಕ್, ಸಲಹೆಗಾರರಾದ ಹಿಮವಂತ ಗೋಪಾಲ್, ಇಬ್ರಾಹೀಂ ಐ, ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಮತ್ತು ವಸೂಲಾತಿ ಅಧಿಕಾರಿ ಜನಾರ್ದನ ಮೊದಲಾದವರು ಉಪಸ್ಥಿತರಿದ್ದರು.







