ಗುಂಡು ಹಾರಿಸಿ ವ್ಯಕ್ತಿಯ ಕೊಲೆ ಪ್ರಕರಣ ಮಣಿಪುರ ಸಿಎಂ ಪುತ್ರನಿಗೆ ಐದು ವರ್ಷ ಜೈಲು ಶಿಕ್ಷೆ

ಹೊಸದಿಲ್ಲಿ, ಮೇ 29: ರಸ್ತೆಯಲ್ಲಿ ಸಂಚರಿಸುವಾಗ ತನ್ನ ವಾಹನಕ್ಕೆ ದಾರಿ ಬಿಡಲಿಲ್ಲ ಎಂಬ ಕಾರಣದಿಂದ ವ್ಯಕ್ತಿಯೋರ್ವನ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪುರದ ಹಾಲಿ ಮುಖ್ಯಮಂತ್ರಿ ಎನ್.ಬೀರೇಂದ್ರ ಸಿಂಗ್ ಅವರ ಪುತ್ರ ಅಜಯ್ ಮಿತಾಯ್‌ಗೆ ಮಣಿಪುರದ ವಿಚಾರಣಾ ನ್ಯಾಯಾಲಯ ಐದು ವರ್ಷದ ಜೈಲುಶಿಕ್ಷೆ ವಿಧಿಸಿದೆ.
2011ರ ಮಾರ್ಚ್ 20ರಂದು ನಡೆದ ಘಟನೆಯಲ್ಲಿ ತನ್ನ ಕಾರಿಗೆ ಮುಂದೆ ಸಾಗಲು ದಾರಿ ಬಿಡಲಿಲ್ಲ ಎಂಬ ಕ್ರೋಧದಿಂದ ಇರೋಮ್ ರೋಜರ್ ಎಂಬಾತನ ಮೇಲೆ ಅಜಯ್ ಮಿತಾಯ್ ಗುಂಡು ಹಾರಿಸಿದ್ದು ರೋಜರ್ ಮೃತಪಟ್ಟಿದ್ದ. ಈ ಪ್ರಕರಣದಲ್ಲಿ ನ್ಯಾಯಾಲಯ ಈತನಿಗೆ ಐದು ವರ್ಷದ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅಜಯ್ ಮಿತಾಯ್ ಪೋಷಕರು ಮಣಿಪುರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಈ ಪ್ರಕರಣದಲ್ಲಿ ರೋಜರ್ ಪೋಷಕರ ಪರ ವಾದಿಸಲು ಯಾವುದೇ ವಕೀಲರು ಮುಂದೆ ಬರಲಿಲ್ಲ ಎಂದು ರೋಜರ್ ಪೋಷಕರ ಪರ ವಾದಿಸಿದ ನ್ಯಾಯವಾದಿ ಕಾಮಿನಿ ಜೈಸ್ವಾಲ್ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ವಾದಿಸದಂತೆ ತನಗೂ ಜೀವಬೆದರಿಕೆ ಒಡ್ಡಲಾಗಿದೆ ಎಂದವರು ತಿಳಿಸಿದ್ದಾರೆ.
ಈ ಪ್ರಕರಣವನ್ನು ಕೇಂದ್ರೀಯ ತನಿಖಾ ಸಮಿತಿ ತನಿಖೆ ನಡೆಸಬೇಕೆಂದು ಮತ್ತು ತಮಗೆ ಭದ್ರತೆ ಒದಗಿಸಬೇಕೆಂದು ಕೋರಿ ರೋಜರ್‌ನ ಪೋಷಕರು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.ಈ ಮನವಿಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಗೃಹ ಕಾರ್ಯದರ್ಶಿಗೆ ಹಾಗೂ ಮಣಿಪುರದ ಪ್ರಧಾನ ಕಾರ್ಯದರ್ಶಿಗೆ ಕಳೆದ ವಾರ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು.





