ಸರ್ವರಿಗೂ ಶಿಕ್ಷಣ ಎನ್ನುವ ಸಂವಿಧಾನದ ಮೂಲ ಆಶ್ರಯ ಈಡೇರಲಿ: ಸುನಿಲ್ ಕುಮಾರ್ ಬಜಾಲ್

ಮಂಗಳೂರು, ಮೇ 29: ಸರ್ವರಿಗೂ ಶಿಕ್ಷಣ, ಸರ್ವರಿಗೂ ಉದ್ಯೋಗ ಎನ್ನುವ ಸಂವಿಧಾನದ ಮೂಲ ಆಶಯವನ್ನು ಈಡೇರಿಸಲು ಸರಕಾರಗಳು ಕಟಿಬದ್ದರಾಗಬೇಕಾಗಿದೆ ಎಂದು ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಹೇಳಿದರು.
ಉರ್ವಾಸ್ಟೋರ್ ಸುಂಕದಕಟ್ಟೆ ಪ್ರದೇಶದಲ್ಲಿ ಡಿವೈಎಫ್‌ಐ ಉರ್ವಾಸ್ಟೋರ್ ಘಟಕ ಆಯೋಜಿಸಿದ ಶಾಲಾ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 70 ವರ್ಷಗಳಾದರೂ ಈ ದೇಶದಲ್ಲಿ ಕಲಿಯುವ ಮನಸ್ಸಿಗೆ ಶಿಕ್ಷಣವನ್ನು, ದುಡಿಯುವ ಕೈಗೆ ಕೆಲಸವನ್ನು, ಪ್ರತಿಯೊಬ್ಬರಿಗೆ ಆರೋಗ್ಯವನ್ನು, ವಸತಿಯನ್ನು ನೀಡಲು ಇನ್ನೂ ಸಾಧ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮನ್ನಾಳುವ ಸರಕಾರಗಳು ಶಿಕ್ಷಣ ಮತ್ತು ಉದ್ಯೋಗಕ್ಕೆ ಭಾರೀ ಪ್ರಾಮುಖ್ಯತೆಯನ್ನು ಕೊಡಬೇಕಾಗಿದೆ. ಮಾತ್ರವಲ್ಲದೆ ಇಂತಹ ಸಂದರ್ಭದಲ್ಲಿ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಡಿವೈಎಫ್‌ಐ ಸಂಘಟನೆ ವರ್ಷಂಪ್ರತಿ ಮಾಡುವ ಪುಸ್ತಕ ವಿತರಣೆ ಮಾಡುವ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿವೈಎಫ್‌ಐ ಉರ್ವಾಸ್ಟೋರ್ ಘಟಕದ ಅಧ್ಯಕ್ಷ ಇಕ್ಬಾಲ್ ವಹಿಸಿದರು. ಮುಖ್ಯ ಅತಿಥಿಗಳಾಗಿ ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿ ಮುಖಂಡರಾದ ಸಂತೋಷ್ ನೀತಿನಗರ, ಡಿವೈಎಫ್‌ಐ ಜಿಲ್ಲಾ ಸಮಿತಿ ಮುಖಂಡರಾದ ನವೀನ್ ಬೊಲ್ಪುಗುಡ್ಡೆ ಭಾಗವಹಿಸಿದ್ದರು.
ಅತಿಥಿಗಳಾಗಿ ಊರಿನ ಹಿರಿಯ ನಾಗರಿಕರಾದ ಪುಷ್ಪ ಶೆಟ್ಟಿ, ಗಂಗಾಧರ್ ಕುಂದರ್, ಸರೋಜ, ಸುಂದರಿ ಭಾಗವಹಿಸಿದ್ದರು. ಡಿವೈಎಫ್‌ಐ ಉರ್ವಾಸ್ಟೋರ್ ಘಟಕದ ಕಾರ್ಯದರ್ಶಿ ಧನರಾಜ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ನೇತೃತ್ವವನ್ನು ಸ್ಥಳೀಯ ಮುಖಂಡರಾದ ಪ್ರಶಾಂತ್ ಎಂ.ಬಿ., ಮನೋಜ್, ನಾಗೇಂದ್ರ, ಅನಿಲ್, ಪ್ರಶಾಂತ್ ಆಚಾರ್, ಪ್ರದೀಪ್ ಮುಂತಾದವರು ವಹಿಸಿದ್ದರು.







