ದಿಲ್ಲಿಯಲ್ಲಿ ಸಿಎಂಗೆ ರಾಜ್ಯದ ಮಹಿಳೆಯ ಮನವಿ

ಹೊಸದಿಲ್ಲಿ, ಮೇ 29: ಭೂ ವಿವಾದ ಬಗೆಹರಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೊಸದಿಲ್ಲಿಯಲ್ಲಿ ರಾಜ್ಯದ ಮಹಿಳೆಯೊಬ್ಬರು ಮನವಿ ಸಲ್ಲಿಸಿದ ಘಟನೆ ಸೋಮವಾರ ಜರುಗಿತು.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ನಿವಾಸಿ ಮುನಿಯಮ್ಮ ಎಂಬವರು ಹೊಸದಿಲ್ಲಿಯಲ್ಲಿರುವ ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ತಮ್ಮ ಭೂ ವಿವಾದ ಬಗೆಹರಿಸುವಂತೆ ಕೋರಿ ಮನವಿ ಸಲ್ಲಿಸಿದರು.
ಭೂ ವಿವಾದಕ್ಕೆ ಸಂಬಂಧಿಸಿದಂತೆ ಹಲವಾರು ಬಾರಿ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಪ್ರಯತ್ನಪಟ್ಟರು ಸಾಧ್ಯವಾಗಿರಲಿಲ್ಲ. ಅವರು ರಾಜ್ಯದಲ್ಲಿ ಯಾವಾಗಲೂ ವ್ಯಸ್ಥರಾಗಿರುತ್ತಾರೆ. ಆದುದರಿಂದ, ಅವರನ್ನು ಭೇಟಿ ಮಾಡುವುದು ಕಷ್ಟ ಎಂಬುದು ಮುನಿಯಮ್ಮ ಅಭಿಪ್ರಾಯ.
ಮುಖ್ಯಮಂತ್ರಿಗಳು ಹೊಸದಿಲ್ಲಿಗೆ ಬರುತ್ತಿರುವ ಮಾಹಿತಿಯನ್ನು ಪಡೆದು, ರೈಲಿನಲ್ಲಿ ಹೊಸದಿಲ್ಲಿಗೆ ಬಂದ ಮುನಿಯಮ್ಮ, ಸಕಾಲಕ್ಕೆ ಕರ್ನಾಟಕ ಭವನಕ್ಕೆ ಬಂದು ಮುಖ್ಯಮಂತ್ರಿಗೆ ತಮ್ಮ ಅಹವಾಲು ಸಲ್ಲಿಸಿದರು. ಮುನಿಯಮ್ಮ ಮಾತುಗಳನ್ನು ಕೇಳಿ ಭಾವುಕರಾದ ಮುಖ್ಯಮಂತ್ರಿಯ ಕಣ್ಣಾಲಿಗಳು ತೇವಗೊಂಡವು. ಕೂಡಲೆ ಜಿಲ್ಲಾಧಿಕಾರಿ ದೀಪ್ತಿ ಕಾನಡೆಯನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಮುನಿಯಮ್ಮ ಅವರ ಸಮಸ್ಯೆಯನ್ನು ಆದ್ಯತೆ ಮೇರೆಗೆ ಬಗೆಹರಿಸುವಂತೆ ಸೂಚನೆ ನೀಡಿದರು.
ಅಲ್ಲದೆ, ಕರ್ನಾಟಕ ಭವನದ ಅಧಿಕಾರಿಗಳನ್ನು ಕರೆದ ಮುಖ್ಯಮಂತ್ರಿ, ಮುನಿಯಮ್ಮಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟದ ವ್ಯವಸ್ಥೆಯನ್ನು ಮಾಡುವಂತೆ ಸೂಚಿಸಿದರು. ಅಲ್ಲದೆ, ಹೊಸದಿಲ್ಲಿಯಿಂದ ಬೆಂಗಳೂರಿಗೆ ಹಿಂದಿರುಗಲು ಆಕೆಗೆ ಹಣಕಾಸಿನ ನೆರವನ್ನು ನೀಡಿದರು.
ತಮ್ಮ ಮನವಿಗೆ ಮುಖ್ಯಮಂತ್ರಿ ಸ್ಪಂದಿಸಿದ ರೀತಿಯನ್ನು ನೋಡಿ ಭಾವುಕರಾದ ಮುನಿಯಮ್ಮ, ಸಿದ್ದರಾಮಯ್ಯರಿಗೆ ಆಶೀರ್ವಾದ ಮಾಡಿದರು.







