ತಮಿಳುನಾಡಿನ ಗಣಿಧಣಿ ಶೇಖರ್ ರೆಡ್ಡಿಯ 9 ಕೋ.ರೂ. ಮೌಲ್ಯದ ಚಿನ್ನ ಜಫ್ತಿ

ಚೆನ್ನೈ, ಮೇ 29: ಕೇಂದ್ರ ಸರಕಾರ ಅಧಿಕ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ಬಳಿಕ, ಕಳೆದ ವರ್ಷದ ಡಿಸೆಂಬರ್‌ನಲ್ಲಿ ತಮಿಳುನಾಡಿನ ಗಣಿಧಣಿ ಶೇಖರ್ ರೆಡ್ಡಿ ಎಂಬಾತನ ನಿವಾಸ, ಕಚೇರಿಯ ಮೇಲೆ ಆದಾಯತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಸುಮಾರು 140 ಕೋಟಿ ರೂ. ನಗದು ಹಾಗೂ ಸುಮಾರು 180 ಕಿ.ಗ್ರಾಂ. ಚಿನ್ನ ವಶಪಡಿಸಿಕೊಂಡಿದ್ದರು.
ಇದರಲ್ಲಿ 30 ಕಿ.ಗ್ರಾಂ.ನಷ್ಟು ಚಿನ್ನವನ್ನು (ಸುಮಾರು 9 ಕೋಟಿ ರೂ. ಮೌಲ್ಯ) ಅಕ್ರಮ ವ್ಯವಹಾರದಿಂದ ಖರೀದಿಸಿರುವುದು ತನಿಖೆಯಿಂದ ತಿಳಿದು ಬಂದಿದ್ದು ಇವನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಶೇಖರ್ ರೆಡ್ಡಿ ಹಣ ಚಲುವೆ ವ್ಯವಹಾರ ನಡೆಸುತ್ತಿರುವುದಾಗಿ ಹೇಳಲಾಗುತ್ತಿದ್ದು ಎಸ್‌ಆರ್‌ಎಸ್ ಗಣಿ ಕಂಪನಿ ಹಾಗೂ ಹಲವೆಡೆ ಮರಳು ಗಣಿಗಾರಿಕೆ ನಡೆಸುತ್ತಿದ್ದಾನೆ. ಡಿಸೆಂಬರ್‌ನಲ್ಲಿ ಈತನ ಬಂಧನವಾಗಿದ್ದು ಇದೀಗ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಜೊತೆ ನಿಕಟಸಂಪರ್ಕ ಹೊಂದಿರುವುದಾಗಿ ಹೇಳಲಾಗಿದ್ದು ಈ ಹಿಂದೆ ಮಾಜಿ ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಜೊತೆ ತಿರುಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿರುವ ಫೋಟೋಗಳಿವೆ. ಈತನ ಬಳಿಯಿಂದ ವಶಪಡಿಸಲಾದ ನಗದು ಹಣ ಅಕ್ರಮ ಎಂಬ ಸಂಶಯವಿದೆ ಎಂದು ತಿಳಿಸಿರುವ ಅಧಿಕಾರಿಗಳು, ಈತ ಸುಮಾರು 400 ಕೋಟಿ ರೂ.ಗಳಷ್ಟು ಹಣವನ್ನು ರಾಜಕಾರಣಿಗಳಿಗೆ ಲಂಚವಾಗಿ ನೀಡಿರುವುದಾಗಿ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರಾಜ್ಯ ಸರಕಾರದಿಂದ ವಿವರಣೆ ಕೋರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ರೀತಿಯ ಯಾವುದೇ ಕೋರಿಕೆ ಬಂದಿಲ್ಲ ಎಂದು ಆಡಳಿತಾರೂಢ ಎಐಎಡಿಎಂಕೆ ಪಕ್ಷ ತಿಳಿಸಿದೆ.





