ಭಾರತ-ಪಾಕ್ ಕ್ರಿಕೆಟ್ ಸರಣಿ ಅಸಾಧ್ಯ: ಸಚಿವ ಗೋಯಲ್ ಸ್ಪಷ್ಟನೆ

ಹೊಸದಿಲ್ಲಿ, ಮೇ 29: ಗಡಿಯಲ್ಲಿ ಭಯೋತ್ಪಾದನಾ ಚಟುವಟಿಕೆ ನಿಲ್ಲುವ ತನಕ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಕ್ರಿಕೆಟ್ ಸರಣಿ ಅಸಾಧ್ಯ ಎಂದು ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಸ್ಪಷ್ಟಪಡಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ತಂಡಗಳು ದ್ವಿಪಕ್ಷೀಯ ಸಂಬಂಧಕ್ಕೆ ಪ್ರಯತ್ನ ನಡೆಸಿದ್ದರೂ, ಎರಡೂ ದೇಶಗಳ ನಡುವೆ ಹಳಸಿರುವ ಸಂಬಂಧದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಪಾಕಿಸ್ತಾನ ಜೊತೆ ಯಾವುದೇ ಸರಣಿ ಆಯೋಜಿಸುವ ಪ್ರಸ್ತಾವನೆಗೂ ಮುನ್ನ ಬಿಸಿಸಿಐ ಸರಕಾರದ ಜೊತೆ ಕಡ್ಡಾಯವಾಗಿ ಚರ್ಚಿಸಬೇಕು ಎಂದು ಸಚಿವ ಗೋಯಲ್ ಹೇಳಿದ್ದಾರೆ.
ಬಿಸಿಸಿಐಗೆ ಈಗಾಗಲೇ ಪಿಸಿಬಿಯು ಲೀಗಲ್ ನೋಟಿಸ್ ಜಾರಿ ಮಾಡಿದ್ದು, ಭಾರತ 2015ರಂದ 2023ರ ತನಕ 5 ದ್ವಿಪಕ್ಷೀಯ ಸರಣಿ ಆಯೋಜಿಸಲು ಮಾಡಿಕೊಂಡ ಒಪ್ಪಂದಂತೆ ನಡೆದುಕೊಂಡಿಲ್ಲ. ಈ ಕಾರಣಕ್ಕಾಗಿ 60 ಮಿಲಿಯನ್ ಯುಎಸ್ ಡಾಲರ್(ಸುಮಾರು 387 ಕೋಟಿ ರೂ.) ಮೊತ್ತದ ನಷ್ಟ ಪರಿಹಾರ ನೀಡುವಂತೆ ಪಾಕಿಸ್ತಾನ ದಾವೆ ಹೂಡಲಿದೆ.
ಪಾಕಿಸ್ತಾನ ವಿರುದ್ಧ ದ್ವಿಪಕ್ಷೀಯ ಸರಣಿ ಆಡಲು ಯಾವುದೇ ತೊಂದರೆ ಇಲ್ಲ.ಆದರೆ ಸರಕಾರದ ಅನುಮತಿ ಸಿಗದೆ ಯಾವುದೇ ಸರಣಿ ಆಯೋಜಿಸಲು ಅಸಾಧ್ಯ ಎಂದು ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ಹೇಳಿಕೆ ನೀಡಿದ್ದರು.ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಗೋಯಲ್ ಅವರು ಕ್ರಿಕೆಟ್ ಮತ್ತು ಭಯೋತ್ಪಾದನೆ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.







