ಫಸಲ್ ಭಿಮಾ ಯೋಜನೆಯಲ್ಲಿ ಕೋಟ್ಯಾಂತರ ರೂ. ಅದಾನಿ ಕಂಪೆನಿಗೆ: ಜೆಡಿಎಸ್ ಮುಖಂಡ ಕೆ.ಟಿ.ಶ್ರೀಕಂಠೇಗೌಡ ಆರೋಪ
ಮಂಗಳೂರು,ಮೇ 29: ಫಸಲ್ ಭಿಮಾ ಯೋಜನೆಯಲ್ಲಿ ಕೋಟ್ಯಾಂತರ ರೂ. ಅದಾನಿಗೆ ಸೇರಿದ ಯುನಿವರ್ಸಲ್ ಕಂಪೆನಿಗೆ ಸಂದಾಯವಾಗಿದೆ. ಈ ಯೋಜನೆ ಸರಕಾರಿ ಸ್ವಾಮ್ಯದ ವಿಮಾ ಸಂಸ್ಥೆಯ ಮೂಲಕ ಅನುಷ್ಠಾನಗೊಳ್ಳಬೇಕಾಗಿತ್ತು ಎಂದು ಜೆಡಿಎಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಜೆಡಿಎಸ್‌ಗೆ ಆಗಮಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ರಾಜ್ಯ ದಿಂದಲೇ ಈ ಯೋಜನೆಗೆ 2,500 ಕೋಟಿ ರೂ. ಸಂದಾಯ ವಾಗಿದೆ. ದೇಶಾದ್ಯಂತ ಅದಾನಿ ಕಂಪೆನಿಗೆ ಈ ಯೋಜನೆಯಿಂದ ಕೋಟ್ಯಾಂತರ ರೂ. ಸಂದಾಯವಾಗಿದೆ. ರಾಜ್ಯದಲ್ಲಿ ರೈತರ ಬೆಳೆ ನಾಶವಾದರೂ ಅವರಿಗೆ ಸೂಕ್ತ ಬೆಂಬಲ ಸರಕಾರದಿಂದಲೂ ಲಭಿಸುತ್ತಿಲ್ಲ. ಬಿಜೆಪಿ 3 ವರ್ಷ ಪುರ್ಣಗೊಳಿಸಿದ ಸಂದರ್ಭದಲ್ಲಿ ಅದ್ಧೂರಿಯಾಗಿ ಆಚರಣೆ ನಡೆಸುತ್ತಿದೆ ಯಾರ ಹಣದಿಂದ ಈ ರೀತಿಯ ಸಂಭ್ರಮಾಚರಣೆ ನಡೆಸಲಾಗುತ್ತಿದೆ ಎಂದು ಜನರ ಮುಂದೆ ಸ್ಪಷ್ಟ ಪಡಿಸಲಿ ಎಂದು ಶ್ರೀಕಂಠೇ ಗೌಡ ಪ್ರಶ್ನಿಸಿದ್ದಾರೆ.
ನೋಟು ಅಮಾನ್ಯ ದಿಟ್ಟ ಕ್ರಮವೇ?...:- ದೇಶದಲ್ಲಿ 1000 ಮತ್ತು 500 ರೂಗಳ ನೋಟುಗಳನ್ನು ಅಮಾನ್ಯಗೊಳಿಸಿರುವುದು ದಿಟ್ಟ ಕಾರ್ಯಕ್ರಮವೇ? ಇದರಿಂದ ನಕಲಿ ನೋಟುಗಳ ಪ್ರಸಾರದ ಹಾವಳಿ ತಡೆಯಲು ಸಾಧ್ಯವಾಗಿದೆಯೇ ? ನೋಟು ಅಮಾನ್ಯ ಗೊಳಿಸಿದ ನಂತರ ಜನರ ಸಮಸ್ಯೆ ಬಗೆಹರಿದಿಲ್ಲ. ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ನೀಡಿದ ಬಿಜೆಪಿಯ ಭರವಸೆ ಏನಾಗಿದೆ ? ಕೇಂದ್ರ ಸರಕಾರ ಮೂರು ವರ್ಷಗಳಲ್ಲಿ ರೈತರಿಗೆ ಕೊಡಬೇಕಾದ 3,050 ಕೋಟಿ ರೂ ಸಾಲವನ್ನು ರಜ್ಯದ ರೈತರಿಗೆ ಕಡಿತಗೊಳಿಸಿದೆ. ರಾಜ್ಯದಲ್ಲಿ ಭೀಕರ ಬರಗಾಲ ಇದೆ ಈ ಸಂದರ್ಭದಲ್ಲಿ ರೈತರ ಬಡ್ಡಿ ಸೇರಿದಂತೆ ಸಾಲಮನ್ನಾ ಮಾಡಲಿ ಕೇಂದ್ರ ಮುಂದಾಗಬೇಕು. ಯಡಿಯೂರಪ್ಪ ಅಧಿಕಾರದಲ್ಲಿ ಇದ್ದಾಗಲೂ ರೈತರ ಸಾಲಮನ್ನಾ ಮಾಡದೇ ಈಗ ಆರೋಪ ಮಾಡುತ್ತಿದ್ದಾರೆ. ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ಈ ಪ್ರಶ್ನೆಗಳಿಗೆ ಉತ್ತರ ನೀಡಲಿ ಎಂದು ಶ್ರೀಕಂಠೇ ಗೌಡ ತಿಳಿಸಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ ಬಲವರ್ಧನೆಗೆ ವಿಶೇಷ ಕಾರ್ಯಾಚರಣೆ:- ರಾಜ್ಯದಲ್ಲಿ ಜೆಡಿಎಸ್‌ನ್ನು ಬೂತ್ ಮಟ್ಟದಿಂದಲೇ ಬಲವರ್ಧನೆ ಗೊಳಿಸಲು ಈ ತಿಂಗಳ 6ನೆ ತಾರೀಕಿನಿಂದ ಬೆಂಗಳೂರಿನಲ್ಲಿರುವ ಪಕ್ಷದ ಕಚೇರಿಯಿಂದ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆಗೆ ಚಾಲನೆ ನೀಡಲಾಗುವುದು. ಒಂದು ತಿಂಗಳ ಒಳಗಾಗಿ ಎಲ್ಲಾ ಬೂತ್ ಮಟ್ಟದಲ್ಲಿ 15 ರಿಂದ 25 ಮಂದಿ ಕಾರ್ಯಕರ್ತರ ತಂಡ ರಚಿಸಲಾಗುವುದು. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದ ಬಗ್ಗೆ ಜನರಿಗೆ ಭ್ರಮನಿರಸನವಾಗಿದೆ. ಬಿಜೆಪಿ ಕೆಜೆಪಿಯಾಗಿ ಒಡೆದ ಬಳಿಕ ಮತ್ತೆ ಒಂದಾಗಲೇ ಇಲ್ಲ ಎಂದು ಜೆಡಿಎಸ್ ರಾಜ್ಯವಕ್ತಾರ ಬೋಜೇ ಗೌಡ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ದ.ಕ ಜಿಲ್ಲಾ ಅಧ್ಯಕ್ಷ ಮುಹಮ್ಮದ್ ಕುಂಞ, ರಾಜ್ಯ ಸಮಿತಿಯ ಮುಖಂಡರಾದ ಅಮರನಾಥ ಶೆಟ್ಟಿ, ಜೆಡಿಎಸ್ ಮುಖಂಡರಾದ ಎಂ.ಬಿ.ಸದಾಶಿವ, ಅಝೀಝ್ ಕುದ್ರೋಳಿ, ಅಶ್ವಿನ್ ಪಿರೇರಾ, ಅಕ್ಷಿತ್ ಸುವರ್ಣ, ಖಾದರ್ ಮುಲ್ಕಿ ಮೊದಲಾದವರು ಉಪಸ್ಥಿತರಿದ್ದರು.







