ರಾಷ್ಟ್ರೀಯ ಹೆದ್ದಾರಿ ರಾಜಕೀಯ: ಅಸಮರ್ಪಕ ಕಾಮಗಾರಿಯ ಆರೋಪ
ಕಾಪು ಪುರಸಭೆ ಸಾಮಾನ್ಯ ಸಭೆ

ಕಾಪು, ಮೇ 29: ಪುರಸಭಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯನ್ನು ಕೆಲವಡೆಗಳಲ್ಲಿ ಅವೈಜ್ಞಾನಿಕವಾಗಿದ ಮಾಡಿದ್ದು, ಇನ್ನು ಕೆಲವಡೆ ಅಪೂರ್ಣ ಕಾಮಗಾರಿ ಆಗಿದೆ. ಇದನ್ನು ತ್ವರಿತವಾಗಿ ಪೂರ್ಣಗೊಳಿಸದಿದ್ದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ಕಾಪು ಪುರಸಭೆಯ ಸರ್ವ ಸದಸ್ಯರು ಎಚ್ಚರಿಕೆ ನೀಡಿದರು.
ಕಾಪು ಪುರಸಭಾ ಸಭಾಂಗಣದಲ್ಲಿ ಸೋಮವಾರ ಪುರಸಭಾ ಅಧ್ಯಕ್ಷೆ ಸೌಮ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೆದ್ದಾರಿ ಇಲಾಖೆಯ ಹಾಗೂ ನವಯುಗ ಕಂಪೆನಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.
ರಾಷ್ಟ್ರೀಯ ಹೆದ್ದಾರಿ ಕೇಂದ್ರ ಸರಕಾರಕ್ಕೆ ಒಳಪಟ್ಟ ಹೆದ್ದಾರಿ ಇಲಾಖೆಯ ಬಗ್ಗೆ ಸಂಸದೆ ಗಮನಹರಿಸಬೇಕು. ಕಾಪು ಪುರಸಭೆ ಅಸ್ತಿತ್ವಕ್ಕೆ ಬಂದು ವರ್ಷವಾದರೂ ಸಂಸದರು ಇಲ್ಲಿಗೆ ಭೇಟಿ ನೀಡಿಲ್ಲ. ಅವರಿಗೆ ಸಮಸ್ಯೆ ಪರಿಹರಿಸುವ ಇಚ್ಛಾಶಕ್ತಿ ಇಲ್ಲವೇ ಎಂದು ಆಡಳಿತ ಪಕ್ಷದ ಸದಸ್ಯರು ವಿರೋಧ ಪಕ್ಷದವರನ್ನು ಕಟುಕಿದರು. ಇದರಿಂದ ಕುಪಿತರಾದ ವಿರೋಧ ಪಕ್ಷದ ಸದಸ್ಯರು, ಕೇಂದ್ರೀಯ ರಸ್ತೆ ನಿಧಿ ಕಾಮಗಾರಿಗಳನ್ನು ತಮ್ಮದೇ ಸಾಧನೆ ಎಂಬ ಪತ್ರಿಕಾ ಹೇಳಿಕೆ ನೀಡುವ ಶಾಸಕರಿಗೆ ಹೆದ್ದಾರಿ ಇಲಾಖೆ ಅಧಿಕಾರಿಗಳನ್ನು ಕರೆಸುವ ಶಕ್ತಿ ಇಲ್ಲವೇ ಎಂದು ಆಡಳಿತ ಪಕ್ಷದವರನ್ನು ತರಾಟೆಗೆ ತೆಗೆದುಕೊಂಡರು.
ನಗರ ಯೋಜನಾ ಪ್ರಾಧಿಕಾರಕ್ಕೆ ಶಾಶ್ವತವಾಗಿ ಅಧಿಕಾರಿಗಳು ಇಲ್ಲವಾದ್ದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಯೋಜನಾ ಪ್ರಾಧಿಕಾರದ ನಿಯಮಗಳ ತಿಳುವಳಿಕೆ ಇಲ್ಲದೆ ಜನರಿಗೆ ತೊಂದರೆಯಾಗುತ್ತಿದೆ ಎಂದು ಕಿರಣ್ ಆಳ್ವ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಾಧಿಕಾರಿ, ವಾರದ ಎರಡು ದಿನ ಪ್ರಾಧಿಕಾರದ ಅಧಿಕಾರಿ ಲಭ್ಯರಿರುವುದರಿಂದ ತೊಂದರೆಯಾಗುತ್ತಿದೆ. ಪ್ರಾಧಿಕಾರದ ನಿಯಮಗಳ ಬಗ್ಗೆ ಒಂದು ವಾರದೊಳಗೆ ಅಧಿಕಾರಿಯನ್ನು ಕರೆಯಿಸಿ ಸದಸ್ಯರಿಗೆ ಮಾಹಿತಿ ನೀಡಲು ಕ್ರಮಕೈಗೊಳ್ಳಲಾಗುವುದು ಎಂದರು.
ಸದಸ್ಯರನ್ನು ಆಹ್ವಾನಿಸದೆ ಪುರಸಭಾ ಸಭಾಂಗಣದಲ್ಲಿ ಕೃಷಿ ಇಲಾಖೆ ಇತ್ತೀಚೆಗೆ ಕೃಷಿ ಮಾಹಿತಿ ಸಭೆ ನಡೆಸಿರುವುದು ಸರಿಯಲ್ಲ. ಇಂತಹ ಸಭೆಗಳಿಗೆ ಸಭಾಭವನವನ್ನು ನೀಡಬಾರದು ಎಂದು ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು. ಕೃಷಿ ಇಲಾಖೆ ನಡೆಸಿರುವುದು ಮಾಹಿತಿ ಸಭೆಯಲ್ಲ, ಜೂನ್ 3 ರಂದು ನಡೆಯುವ ಮಾಹಿತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಷ್ಟೇ ಎಂದು ರಾಯಪ್ಪ ಸಮಜಾಯಿಷಿ ನೀಡಿದರು.
ನೀರಿನ ಸಂಪರ್ಕಕ್ಕೆ ಪೈಪುಲೈನ್ ಕಾಮಗಾರಿಗೆ ಗುತ್ತಿಗೆದಾರರು ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಕಿರಣ್ ಆಳ್ವ ಒತ್ತಾಯಿಸಿದರು. ಇದಕ್ಕುತ್ತರಿಸಿದ ಮುಖ್ಯಾಧಿಕಾರಿ, ಈ ಗುತ್ತಿಗೆದಾರರ ವಿರುದ್ಧ ಹಲವಾರು ದೂರುಗಳು ಬಂದಿದ್ದು, ಅವರ ಪರವಾನಿಗೆಯನ್ನು ರದ್ದು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಿಸಿ ಟಿವಿ: ಪುರಸಭಾ ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚುತಿದ್ದು, ಅಪರಾಧಗಳು ಹೆಚ್ಚಾಗುತ್ತಿದೆ. ಅಪರಾಧ ತಡೆಗಟ್ಟಲು ಹಾಗೂ ಪತ್ತೆ ಮಾಡುವ ಹಿನ್ನಲೆಯಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು ಎಂಬ ಪೊಲೀಸ್ ಆಯುಕ್ತರ ಮನವಿಯ ಮೇರೆಗೆ ಸೂಕ್ತ ಸ್ಥಳಗಳಲ್ಲಿ ಗುಣಮಟ್ಟದ ಸಿಸಿಟಿವಿ ಅಳವಡಿಸಲು ಸಭೆ ನಿರ್ಣಯಿಸಿತು.
ಪುರಸಭಾ ಅಧ್ಯಕ್ಷೆ ಸೌಮ್ಯಾ, ಉಪಾಧ್ಯಕ್ಷ ಕೆ.ಎಚ್. ಉಸ್ಮಾನ್, ಸ್ಥಾಯೀ ಸಮಿತಿ ಅಧ್ಯಕ್ಷ ಹಮೀದ್ ಮೂಳೂರು ಇದ್ದರು







