ಕೂಲಿ ಕಾರ್ಮಿಕರೊಬ್ಬರ ಮೃತ್ಯು, ಇಬ್ಬರಿಗೆ ಗಾಯ
ಇಟ್ಟಿಗೆ ನಿರ್ಮಾಣ ಕಾರ್ಖಾನೆಯಲ್ಲಿ ವಿದ್ಯುತ್ ಅವಘಡ
ಪುತ್ತೂರು, ಮೇ 29: ಸಿಮೆಂಟ್ ಇಟ್ಟಿಗೆ ನಿರ್ಮಾಣದ ಕಾರ್ಖಾನೆಯಲ್ಲಿ ವಿದ್ಯುತ್ ಶಾರ್ಟ್ ಸಕ್ಯೂಟ್ ಸಂಭವಿಸಿದ ಪರಿಣಾಮವಾಗಿ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರೊಬ್ಬರು ಮೃತಪಟ್ಟು, ಇಬ್ಬರು ಕಾರ್ಮಿಕರು ಗಾಯಗೊಂಡ ಘಟನೆ ರವಿವಾರ ಪುತ್ತೂರು ತಾಲೂಕಿನ ಕಬಕ ಗ್ರಾಮದ ಕೆದುವಡ್ಕ ಎಂಬಲ್ಲಿ ನಡೆದಿದೆ.
ಬಿಹಾರ ಮೂಲದ ಕಾರ್ಮಿಕ ಮುಖೇಶ್ (33) ಮೃತಪಟ್ಟವರು. ಅವರ ಜೊತೆ ಕೆಲಸ ಮಾಡುತ್ತಿದ್ದ ಕಾರ್ಮಿಕರಾದ ಅಜೇಯ ಕುಮಾರ್ ಮತ್ತು ಜಯಕುಮಾರ್ ಎಂಬವರು ಸಣ್ಣಪುಟ್ಟ ಗಾಯಗೊಂಡು ಅಪಾಯದಿಂದ ಪಾರಾಗಿರುವುದಾಗಿ ತಿಳಿದು ಬಂದಿದೆ.
ಕಬಕ ಗ್ರಾಮದ ಕೆದುವಡ್ಕ ಎಂಬಲ್ಲಿ ಮಹಮ್ಮದ್ ಬಶೀರ್ ಎಂಬವರು ನಡೆಸುತ್ತಿರುವ ಸಿಮೆಂಟ್ ಇಟ್ಟಿಗೆ ನಿರ್ಮಾಣದ ಕಾರ್ಖಾನೆಯಲ್ಲಿ ವಿದ್ಯುತ್ ಶಾರ್ಟ್ ಸಕ್ಯೂಟ್ ಸಂಭವಿಸಿ ಈ ಅವಘಡ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸಕ್ಯೂಟ್ ಸಂಭವಿಸಿದ ವೇಳೆ ಕಾರ್ಖಾನೆಯೊಳಗೆ ಕೆಲಸ ಮಾಡುತ್ತಿದ್ದ ಮುಖೇಶ್ ಎಂಬವರಿಗೆ ವಿದ್ಯುತ್ ಸ್ಪರ್ಶಿಸಿಸದ ಪರಿಣಾಮವಾಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಗಾಯಗೊಂಡ ಅಜೇಯ ಕುಮಾರ್ ಮತ್ತು ಜಯಕುಮಾರ್ ಅವರು ಪ್ರಥಮ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾರೆ.
ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.







