ಅಧಿಕಾರಿಯ ಮೊಬೈಲ್ ಕಳವು: ಕಚೇರಿ ಸಿಸಿ ಕ್ಯಾಮರಾದಲ್ಲಿ ಸೆರೆ
ಪುತ್ತೂರು, ಮೇ 29: ಪುತ್ತೂರಿನ ಮಿನಿ ವಿಧಾನಸೌಧ ಕಟ್ಟಡದಲ್ಲಿರುವ ತಾಲ್ಲೂಕು ಕಚೇರಿಯಿಂದ ಮಹಿಳಾ ಅಧಿಕಾರಿಯೊಬ್ಬರ ಮೊಬೈಲ್ ಕಳವಾದ ಘಟನೆ ವಾರದ ಹಿಂದೆ ನಡೆದಿದ್ದು, ಕಳವಿನ ದೃಶ್ಯ ಕಚೇರಿಯಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ತಾಲೂಕು ಕಚೇರಿಯ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿ ಮಧ್ಯಾಹ್ನ ವೇಳೆ ಕಚೇರಿಯ ಬಾಗಿಲು ಮುಚ್ಚಿ ಊಟಕ್ಕೆ ತೆರಳಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ತಾಲ್ಲೂಕು ಕಚೇರಿಯ ಮುಚ್ಚಲಾಗಿದ್ದ ಬಾಗಿಲನ್ನು ತೆರೆದು ಒಳಹೋಗಿ ಮಹಿಳಾ ಅಧಿಕಾರಿಯ ಮೇಜಿನ ಡ್ರಾಯರ್‌ಗೆ ಕೈಹಾಕಿ ಹುಡುಕಾಡಿ ಅಲ್ಲಿದ್ದ ಮೊಬೈಲೊಂದನ್ನು ಹಿಡಿದುಕೊಂಡು ಹೋಗಿರುವ ದೃಶ್ಯ ಅಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಘಟನೆಯ ಕುರಿತು ಪುತ್ತೂರು ನಗರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯವನ್ನು ಪರಿಶೀಲಿಸಿರುವ ಪೊಲೀಸರು ಆ ಆಧಾರದಲ್ಲಿ ಆರೋಪಿಯ ಪತ್ತೆಗೆ ಇದೀಗ ಮುಂದಾಗಿದ್ದಾರೆ.
Next Story





