ಬಿಯರ್ ಬಾರ್ ಉದ್ಘಾಟಿಸಿದ ಯೋಗಿ ಸಂಪುಟ ಸಚಿವೆ!

ಲಕ್ನೋ, ಮೇ 30: ಉತ್ತರ ಪ್ರದೇಶದ ಸಚಿವೆ ಸ್ವಾತಿ ಸಿಂಗ್ ಅವರು ಬಿಯರ್ ಬಾರ್ ಉದ್ಘಾಟಿಸಿದ್ದಾರೆ ಎನ್ನಲಾದ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ರಾಜಕೀಯ ವಲಯದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿದೆ. ಇದು ಭಾರತೀಯ ಜನತಾ ಪಕ್ಷದ ನೈಜ ಮುಖವೇ ಎಂದು ವಿರೋಧ ಪಕ್ಷಗಳು ಲೇವಡಿ ಮಾಡಿವೆ.
ಈ ಚಿತ್ರದಲ್ಲಿ ಉತ್ತರಪ್ರದೇಶದ ಕೃಷಿ ರಫ್ತು ಖಾತೆ ರಾಜ್ಯ ಸಚಿವೆ ಸ್ವಾತಿ ಸಿಂಗ್ ಅವರು ಬಿಯರ್ ಬಾರ್ ಉದ್ಘಾಟಿಸುತ್ತಿದ್ದಾರೆ. ಕೆಲ ಹಿರಿಯ ಅಧಿಕಾರಿಗಳ ಜತೆ ಬಾರ್‌ನ ರಿಬ್ಬನ್ ಕತ್ತರಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಈ ಬಗ್ಗೆ ತಕ್ಷಣ ಅಭಿಪ್ರಾಯ ವ್ಯಕ್ತಪಡಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಚಿವೆಗೆ ಸೂಚನೆ ನೀಡಿದ್ದಾರೆ.
"ಸ್ವಾತಿ ಸಿಂಗ್ ಅವರು ಬಿಯರ್ ಬಾರ್ ಉದ್ಘಾಟಿಸಿದ್ದಾರೆ ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ, ತಕ್ಷಣ ಎಲ್ಲ ಮಾಹಿತಿಗಳನ್ನೊಳಗೊಂಡ ವರದಿ ಸಲ್ಲಿಸುವಂತೆ ಆಕೆಗೆ ಸೂಚಿಸಿದ್ದಾರೆ" ಎಂದು ಅಧಿಕೃತ ಪ್ರಕಟನೆ ಹೇಳಿದೆ.
ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ಪಕ್ಷದಿಂದ ಅಮಾನತುಗೊಂಡಿರುವ ದಯಾಶಂಕರ ಸಿಂಗ್ ಅವರ ಪತ್ನಿಯಾದ ಸ್ವಾತಿ ಸಿಂಗ್, ಮೇ 20ರಂದು ಬಾರ್ ಉದ್ಘಾಟಿಸಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆಗೆ ಅವರು ಲಭ್ಯರಿಲ್ಲ. ಈ ಸಮಾರಂಭದಲ್ಲಿ ಭಾಗವಹಿಸಿದ್ದಾರೆ ಎನ್ನಲಾದ ಗೌರವ್ ಸಿಂಗ್ ಹಾಗೂ ನೇಹಾ ಪಾಂಡೆ ಎಂಬ ಐಎಎಸ್ ದಂಪತಿಗಳಿಂದಲೂ ಸಿಎಂ ವರದಿ ಕೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಮದ್ಯದ ವಿರುದ್ಧ ಹೋರಾಟ ಜೋರಾಗಿದ್ದು, ಮದ್ಯ ನಿಷೇಧ ಹೇರುವಂತೆ ಒತ್ತಡಗಳು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಸಚಿವೆ ಬಾರ್ ಉದ್ಘಾಟಿಸಿರುವ ಪ್ರಕರಣ, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.







