ಹಾದಿಯ ವಿವಾಹ ಪ್ರಕರಣ: ಎರ್ನಾಕುಲಂ ಜಿಲ್ಲೆಯಲ್ಲಿ ಹರತಾಳ

ಕೊಚ್ಚಿ,ಮೇ 30: ಎರ್ನಾಕುಲಂ ಜಿಲ್ಲೆಯಲ್ಲಿ ಇಂದು ಬೆಳಗ್ಗಿನಿಂದ ಹರತಾಳ ನಡೆಯುತ್ತಿದೆ. ವೈಕಂ ಎನ್ನುವಲ್ಲಿನ ನಿವಾಸಿ ಅಖಿಲಾ ಯಾನೆ ಹಾದಿಯಾಳ ವಿವಾಹವನ್ನು ಹೈಕೋರ್ಟು ತಡೆದ ಹಿನ್ನೆಲೆಯಲ್ಲಿ ಮುಸ್ಲಿಂ ಏಕೋಪನ ಸಮಿತಿ ಸಂಘಟನೆ ಕರೆನೀಡಿದ ಹರತಾಳ ಪ್ರಗತಿಯಲ್ಲಿದೆ. ಹಾದಿಯಾಳ ಮದುವೆಯನ್ನು ವಿರೋಧಿಸಿ ಯುವತಿಯ ತಂದೆ ಹೈಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ಹೈಕೋರ್ಟು ಮದುವೆ ರದ್ದುಪಡಿಸಿ ನೀಡಿದ ತೀರ್ಪಿನಲ್ಲಿ , ಮದುವೆಯಲ್ಲಿ ಹೆತ್ತವರು ಭಾಗವಹಿಸಿಲ್ಲ ಎನ್ನುವುದನ್ನು ಬೆಟ್ಟು ಮಾಡಿದೆ.
ತೀರ್ಪನ್ನು ಪ್ರತಿಭಟಿಸಿ ಮುಸ್ಲಿಮ್ ಏಕೋಪನ ಸಮಿತಿ ಇಂದು ಹರತಾಳಕ್ಕೆ ಕರೆನೀಡಿತ್ತು. ನಿನ್ನೆ ಏಕೋಪನ ಸಮಿತಿ ಹೈಕೋರ್ಟ್ ಜಾಥಾ ನಡೆಸಿತ್ತು. ಸೇಂಟ್ ಅಲ್ಬರ್ಟ್ಸ್ ಕಾಲೇಜಿನ ಮುಂದೆ ಜಾಥಾವನ್ನು ಪೊಲೀಸರು ತಡೆದಿದ್ದರು. ನಿನ್ನೆ ನಿರೀಕ್ಷೆಗಿಂತ ಹೆಚ್ಚು ಮಂದಿ ಜಾಥಾದಲ್ಲಿ ಭಾಗವಹಿಸಿದ್ದು, ಬ್ಯಾರಿಕೇಡ್‌ಗಳನ್ನು ಕೆಡವಿ ಮುಂದೆ ಸಾಗಿದಾಗ ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದರು, ನಂತರ ಲಾಠಿಚಾರ್ಜು ನಡೆಸಲಾಗಿತ್ತು. ಇದನ್ನು ಪ್ರತಿಭಟಿಸಿ ಏಕೋಪನ ಸಮಿತಿ ಇಂದು ಹರತಾಳ ಆಚರಿಸುತ್ತಿದೆ. ವೈಕಂ ನಿವಾಸಿ ಅಖಿಲಾಳು ಹಾದಿಯಳಾಗಿ ಕೊಲ್ಲಂನ ಶೇಫಿನ್ ಜಹಾನ್‌ರನ್ನು ಮದುವೆಯಾಗಿದ್ದಾಳೆ. ಈ ಮದುವೆಯನ್ನು ವಿರೋಧಿಸಿದ ಹಾದಿಯಾಳ ತಂದೆತಾಯಿ ಪರ ತೀರ್ಪು ಬಂದಿದೆ. ಶೆಫಿನ್ ಜಹಾನ್ ಈ ತೀರ್ಪು ನಾಗರಿಕ ಹಕ್ಕಿನ ಉಲ್ಲಂಘನೆಯಾಗಿದೆ. ಪತ್ನಿಯನ್ನು ತನ್ನ ವಶಕ್ಕೆ ಪಡೆಯಲು ಸುಪ್ರೀಂಕೋರ್ಟಿನ ಮೊರೆಹೋಗುವೆ ಎಂದು ಹೇಳಿದ್ದಾರೆ. ಮಾನವಹಕ್ಕು ಹೋರಾಟಗಾರರು ಕೂಡಾ ಹಾದಿಯಾಳ ಮದುವೆ ರದ್ದು ತೀರ್ಪನ್ನು ವಿರೋಧಿಸಿದ್ದಾರೆ.







