ಆಶಾ ಕಾರ್ಯಕರ್ತೆಯರಿಗೆ ಅನುದಾನ ಹಂಚಿಕೆಯಲ್ಲಿ ಅವ್ಯವಹಾರ: ತನಿಖೆಗೆ ಒತ್ತಾಯಿಸಿ ದೂರು

ತುಮಕೂರು, ಮೇ 30: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ, ತಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗೆ ಕಳುಹಿಸಲು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತುಮಕೂರು ಡಿ.ಹೆಚ್.ಒ ಕಚೇರಿಯಲ್ಲಿ ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಪ್ರಯತ್ನಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ನೀಡುವ ವಿಚಾರದಲ್ಲಿ ಇಲಾಖೆಗೆ ಸಂಬಂಧವಿಲ್ಲದ ಆರು ಮಂದಿಗೆ 31.67 ಲಕ್ಷ ರೂ. ಪಾವತಿ ಮಾಡುವ ಮೂಲಕ ಅಕ್ರಮ ಎಸಗಲಾಗಿದೆ. ಇದನ್ನು ಸಂಘ ಖಂಡಿಸುತ್ತದೆ. ಗ್ರಾಮೀಣ ಭಾಗದ ಜನರಿಗೆ ಸರಕಾರದ ಆರೋಗ್ಯ ಸೌಲಭ್ಯಗಳನ್ನು ತಲುಪಿಸುತ್ತಿರುವ ಆಶಾ ಕಾರ್ಯಕರ್ತೆಯರು ಕಡಿಮೆ ವೇತನಕ್ಕೆ ದುಡಿಯುತ್ತಿದ್ದರೂ ಅವರಿಗೆ ನೀಡುವ ಗೌರವಧನದಲ್ಲಿಯೂ ಅವ್ಯವಹಾರ ನಡೆದಿರುವುದು ದುರದೃಷ್ಟಕರ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸಿ ತಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಗ್ರಾಮೀಣ ಭಾಗದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಲು ಲಾರ್ವ ಸಮೀಕ್ಷೆ, ರಕ್ತ ಪರೀಕ್ಷೆ ಇನ್ನಿತರ ಪ್ರೋತ್ಸಾಹ ಧನಗಳನ್ನು ನೀಡದೆ ಶೋಷಣೆ ಮಾಡಲಾಗುತ್ತಿದೆ. ಕೆಲ ಆಶಾ ಕಾರ್ಯಕರ್ತೆಯರು ತಮ್ಮ ಸ್ವಂತ ಕರ್ಚಿನಲ್ಲಿ ಈ ಪರೀಕ್ಷೆಗಳನ್ನು ಮಾಡಿಸಿದ್ದಾರೆ. ಆದರೆ ಇವರಿಗೆ ನೀಡಬೇಕಾದ ಪ್ರೋತ್ಸಾಹ ಧನ ಇತರರ ಪಾಲಾಗಿರುವುದು. ಪ್ರಕರಣ ಬಯಲಿಗೆ ಬಂದ ನಂತರವೂ ತಪಿತಸ್ಥರ ವಿರುದ್ದ ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಅಲ್ಲದೆ ಅಡಿಟ್ ವೇಳೆ ಈ ಅವ್ಯವಹಾರದಲ್ಲಿ ಕಚೇರಿಯ ಸಿಬ್ಬಂದಿಯೇ ಭಾಗಿಯಾಗಿರುವುದು ದೃಢಪಟ್ಟಿದೆ. ಇಷ್ಟಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ತಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು. ಬಾಕಿ ಇರುವ ಆಶಾ ಕಾರ್ಯಕರ್ತೆಯರ ಗೌರವಧನವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು, ಕಾರ್ಯದರ್ಶಿ ಲತಾ, ಪದಾಧಿಕಾರಿಗಳಾದ ಪದ್ಮರೇಖಾ, ಗೀತಾ, ಲಕ್ಷ್ಮಿದೇವಮ್ಮ, ಪುಷ್ಪಲತಾ, ಗಾಯಿತ್ರಿ ಮತ್ತಿತರರು ಪಾಲ್ಗೊಂಡಿದ್ದರು.







