ಹಳಿಯಲ್ಲಿ ಸೆಲ್ಫೀ ತೆಗೆಯುತ್ತಿದ್ದ ವ್ಯಕ್ತಿ ರೈಲು ಬಡಿದು ಸಾವು ; ಕೈ ಕಳೆದುಕೊಂಡ ಸ್ನೇಹಿತ

ಹೈದರಾಬಾದ್,ಮೇ.30: ರೈಲು ಹಳಿಯಲ್ಲಿ ನಿಂತುಕೊಂಡು ಸೆಲ್ಫೀ ಕ್ಲಿಕ್ಕಿಸುತ್ತಿದ್ದ ಇಬ್ಬರು ವ್ಯಕ್ತಿಗಳಿಗೆ ರೈಲೊಂದು ಡಿಕ್ಕಿ ಹೊಡೆದ ಪರಿಣಾಮ ಅವರಲ್ಲೊಬ್ಬ ಮೃತಪಟ್ಟು ಇನ್ನೊಬ್ಬ ಕೈ ಕಳೆದುಕೊಂಡ ಘಟನೆ ಮಂಗಳವಾರದಂದು ಸೆಕುಂದರಾಬಾದ್ ಸಮೀಪದ ಅಲ್ವಲ್ ರೈಲು ನಿಲ್ದಾಣದ ಸಮೀಪ ನಡೆದಿದೆ.
ಮೃತಪಟ್ಟವನನ್ನು ಸಂಪತ್ ಕುಮರ್ ಎಂದು ಗುರುತಿಸಲಾಗಿದೆ. ಆತ ಸೆಕುಂದರಾಬಾದ್ ಗೆ ತನ್ನ ಗೆಳೆಯನೊಬ್ಬನ ವಿವಾಹಕ್ಕೆ ಆಗಮಿಸಿದ್ದನೆನ್ನಲಾಗಿದೆ.
ಗೋದಾವರಿ ಖನಿ ಪ್ರದೇಶದಲ್ಲಿ ಡಂಪರ್ ಆಪರೇಟರ್ ಆಗಿರುವ ಸಂಪತ್ ಮಂಗಳವಾರ ಅಲ್ವಲ್ ರೈಲು ನಿಲ್ದಾಣಕ್ಕೆ ತನ್ನ ಕೆಲ ಸ್ನೇಹಿತರನ್ನು ಬರಮಾಡಿಕೊಳ್ಳಲು ತೆರಳಿದ್ದನು. ಅಗ ಕುಮಾರ್ ಮತ್ತವನ ಸ್ನೇಹಿತ ಶ್ರವಣ್ ರೈಲು ಹಳಿಯಲ್ಲಿ ನಿಂತುಕೊಂಡು ತಮ್ಮ ಮೊಬೈಲ್ ಫೋನಿನಲ್ಲಿ ಸೆಲ್ಫೀ ತೆಗೆಯಲಾರಂಭಿಸಿದ್ದರು. ರೈಲು ದೂರದಿಂದ ಬರುತ್ತಿರುವುದು ಅವರು ನೋಡಿದ್ದರಾದರೂ ಅದು ನಿಲ್ದಾಣ ತಲುಪುವುದರೊಳಗಾಗಿ ತಾವು ಒಂದೆರಡು ಸೆಲ್ಫೀ ತೆಗೆದು ಮುಗಿಸಬಹುದೆಂದು ಅವರಂದುಕೊಳ್ಳುವಷ್ಟರಲ್ಲಿ ವೇಗವಾಗಿ ಬರುತ್ತಿದ್ದ ರೈಲು ಬಡಿದು ಸಂಪತ್ ಸ್ಥಳದಲ್ಲಿಯೇ ಮೃತಪಟ್ಟರೆ ಆತನ ಗೆಳೆಯ ಶ್ರವಣ್ ಪ್ರಾಣಾಪಾಯದಿಂದ ಪಾರಾಗಿದ್ದರೂ ಕೈಯ್ಯೊಂದನ್ನು ಕಳೆದುಕೊಳ್ಳಬೇಕಾಗಿ ಬಂದಿದೆ.
ಮೃತಪಟ್ಟ ಸಂಪತ್ ವಿವಾಹಿತನಾಗಿದ್ದು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾನೆ.





