ಸೈಬರ್ ಕ್ರೈಂ ಪತ್ತೆಗಾಗಿ ಸೈಬರ್ ಲ್ಯಾಬ್: ಕಿಶೋರ್ ಚಂದ್ರ

ಮಂಗಳೂರು, ಮೇ 30: ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ಪತ್ತೆಹಚ್ಚುವ ಸಲುವಾಗಿ ಬೆಂಗಳೂರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆ ಹಾಗೂ ಸೌಲಭ್ಯಗಳನ್ನು ಹೊಂದಿರುವ ಸೈಬರ್ ಲ್ಯಾಬ್‌ನ್ನು ನಿರ್ಮಿಸಲಾಗುವುದು ಎಂದು ಸಿಐಡಿ ಪೊಲೀಸ್ ಮಹಾನಿರ್ದೇಶಕ ಕಿಶೋರ್ ಚಂದ್ರ ಹೇಳಿದರು.
ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಲೌಡ್ ಕಂಪ್ಯೂಂಟಿಂಗ್ ಮುಂತಾದ ನೂತನ ವರ್ಷನ್ ತಂತ್ರಜ್ಞಾನಗಳನ್ನು ಹೊಂದಿರುವ ಸೈಬರ್ ಲ್ಯಾಬ್‌ನ್ನು ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಬಗ್ಗೆ ಯೋಜನೆ ಹಾಕಲಾಗಿದೆ. ಇಷ್ಟು ಮಾತ್ರವಲ್ಲದೆ ಜಿಲ್ಲಾ ವ್ಯಾಪ್ತಿಗಳಲ್ಲಿರುವ ಸೈಬರ್ ವಿಭಾಗಗಳ ವ್ಯವಸ್ಥೆಗಳನ್ನೂ ಮೇಲ್ದರ್ಜೆಗೇರಿಸಲು ಚಿಂತನೆ ನಡೆದಿದೆ ಎಂದರು.
ರಾಜ್ಯದಲ್ಲಿ ಸೈಬರ್ ಕ್ರೈಂ ವಿಭಾಗವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಆ್ಯಪ್ ಸಂಬಂಧಿತ ಮಾಹಿತಿ ಸಂಗ್ರಹಕ್ಕೆ ತಾಂತ್ರಿಕ ತೊಂದರೆಯಿದೆ. ಮಂಗಳೂರು ರಾಜ್ಯದಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು ಬ್ಯಾಂಕ್ ಕ್ಷೇತ್ರದ ತವರು ಜಿಲ್ಲೆ. ಬೆಂಗಳೂರಿನಲ್ಲಿ ಈಗಾಗಲೇ ಸೈಬರ್ ಕ್ರೈಂ ಸಂಬಂಧಿತ ಅನೇಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಈ ಕಾರ್ಯಕ್ರಮ ಕೇವಲ ಬೆಂಗಳೂರಿಗೆ ಸೀಮಿತವಾಗಬಾರದೆಂಬ ಉದ್ದೇಶದಿಂದ ರಾಷ್ಟ್ರಮಟ್ಟದ ಈ ಕಾರ್ಯಾಗಾರ ಮಂಗಳೂರಿನಲ್ಲಿ ಆಯೋಜಿಸಲಾಗಿದೆ ಎಂದವರು ಹೇಳಿದರು.
ಈ ಸಂದರ್ಭ ಸಿಐಡಿ ಎಡಿಜಿಪಿ ಪ್ರತಾಪ್ ರೆಡ್ಡಿ, ಮಂಗಳೂರು ಪೊಲೀಸ್ ಕಮಿಷನರ್ ಚಂದ್ರಶೇಖರ್ ಉಪಸ್ಥಿತರಿದ್ದರು.







