ಕೇಂದ್ರದ ಗೋಹತ್ಯೆ ನಿಷೇಧ ನಿಯಮಕ್ಕೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ

ಹೊಸದಿಲ್ಲಿ, ಮೇ. 30 : ಕೇಂದ್ರದ ಗೋ ಹತ್ಯೆ ನಿಷೇಧ ನಿಯಮಕ್ಕೆ ಮದ್ರಾಸ್ ಹೈಕೋರ್ಟಿನ ಮಧುರೈ ಪೀಠ ನಾಲ್ಕು ವಾರಗಳ ತಡೆಯಾಜ್ಞೆ ವಿಧಿಸಿದೆ. ಈ ಅವಧಿಯೊಳಗಾಗಿ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ನ್ಯಾಯಾಲಯವು ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಿದೆ. ಮಧುರೈ ಮೂಲದ ಸಾಮಾಜಿಕ ಕಾರ್ಯಕರ್ತ ಹಾಗೂ ವಕೀಲರಾದ ಸೆಲ್ವಗೋಮತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ತಡೆಯಾಜ್ಞೆ ವಿಧಿಸಿದೆ.
ಕೇಂದ್ರ ಪರಿಸರ ಸಚಿವಾಲಯ ಕಳೆದ ವಾರ ಹೊರಡಿಸಿದ ಅಧಿಸೂಚನೆಯಲ್ಲಿ ಗೋವುಗಳನ್ನು ಕಸಾಯಿಖಾನೆಗಳಿಗೆ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಜಾನುವಾರು ಮಾರುಕಟ್ಟೆಗಳಲ್ಲಿ ನಡೆಯುವ ಖರೀದಿ ಮತ್ತು ಮಾರಾಟದ ವಿಚಾರಗಳಲ್ಲಿ ಕಠಿಣ ನಿಯಮಗಳನ್ನೂ ಸಚಿವಾಲಯ ವಿಧಿಸಿತ್ತು. ಹೊಸ ನಿಯಮಗಳ ಪ್ರಕಾರ ರಾಜ್ಯವೊಂದರ ಗಡಿಯಿಂದ 25 ಕಿಮೀ ವ್ಯಾಪ್ತಿಯ ಹಾಗೂ ಅಂತಾರಾಷ್ಟ್ರೀಯ ಗಡಿಯಿಂದ 50 ಕಿಮೀ ವ್ಯಾಪ್ತಿಯ ಪ್ರದೇಶಗಳಲ್ಲಿ ಯಾವುದೇ ಜಾನುವಾರು ಮಾರುಕಟ್ಟೆ ಸ್ಥಾಪಿಸಲು ಅವಕಾಶವಿಲ್ಲವಾಗಿದೆ.
ಈ ನಿಯಮಾವಳಿ ಪಶ್ಚಿಮ ಬಂಗಾಳ, ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳೂ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ.





